ಮುಂಬೈ: ಅಕ್ರಮ ಹಣ ವರ್ಗಾವಣೆ ಆರೋಪದ ಮೇಲೆ ಜಾರಿ ನಿರ್ದೇಶನಾಲಯದ ವಶದಲ್ಲಿರುವ ಯೆಸ್ ಬ್ಯಾಂಕ್ ಸಂಸ್ಥಾಪಕ ರಾಣಾ ಕಪೂರ್ ಅವರು ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ಅವರ ಬಳಿ 2 ಕೋಟಿ ರೂ. ಕೊಟ್ಟು ಖರೀದಿಸಿದ್ದ ಪೇಂಟಿಂಗ್ ಅನ್ನು ಇಡಿ ವಶಕ್ಕೆ ಪಡೆದಿದೆ.
ಇಡಿ ತನಿಖೆಯ ವೇಳೆ ಈ ವಿಚಾರ ಬೆಳಕಿಗೆ ಬಂದಿದ್ದು, 2010ರಲ್ಲಿ ಪೇಂಟಿಂಗ್ ಖರೀದಿ ವಿಚಾರವಾಗಿ ರಾಣಾ, ಪ್ರಿಯಾಂಕಾಗೆ ಪತ್ರ ಬರೆದಿರುವುದು ಕೂಡ ಬೆಳಕಿಗೆ ಬಂದಿದೆ.
ಮುಂಬೈನಲ್ಲಿ ಜಾರಿ ನಿರ್ದೇಶನಾಲಯ (ಇಡಿ), ಮಾಜಿ ಪ್ರಧಾನಿ ರಾಜೀವ್ ಗಾಂಧಿ ಅವರ ಭಾವಚಿತ್ರವಿರುವ ಪ್ರಿಯಾಂಕಾ ವಾದ್ರಾ ಬಿಡಿಸಿರುವ ಪೇಂಟಿಂಗ್ ಅನ್ನು ವಶಕ್ಕೆ ಪಡೆದುಕೊಂಡಿದೆ. 2010ರಲ್ಲಿ ಪ್ರಿಯಾಂಕಾ ಗಾಂಧಿ ಅವರು ಕಪೂರ್ ಅವರಿಗೆ ಬರೆದ ಪತ್ರದ ಮುಖೇನ 2 ಕೋಟಿ ರೂ. ಪೇಂಟಿಂಗ್ ಖರೀದಿಸಿದ್ದು ದೃಢಪಟ್ಟಿದೆ. ಈ ಪೇಂಟಿಂಗ್ ಅನ್ನು ಇಡಿ ವಶಕ್ಕೆ ಪಡೆದುಕೊಂಡಿದೆ.
ಮಹಾರಾಷ್ಟ್ರ ಕಾಂಗ್ರೆಸ್ ಮುಖಂಡ ಮಿಲಿಂದ್ ಡಿಯೋರಾ ಅವರು 2010ರ ಮೇ 1ರಂದು ಕಪೂರ್‌ಗೆ ಪತ್ರ ಬರೆದಿದ್ದರು. ಪೇಂಟಿಂಗ್ ಖರೀದಿಸಲು ಪ್ರಿಯಾಂಕಾ ಗಾಂಧಿಯನ್ನು ನೇರವಾಗಿ ಸಂಪರ್ಕಿಸುವಂತೆ ಕೇಳಿಕೊಂಡರು ಎಂದು ತನಿಖೆಗೆ ಸಂಬಂಧಿಸಿರುವ ಇಡಿ ಅಧಿಕಾರಿಗಳು ತಿಳಿಸಿದ್ದಾರೆ.
ಪೇಂಟಿಂಗ್ ಕುರಿತು ತನಿಖೆ ಮಾಡಲಾಗುವುದು. ಅದರ ಮೌಲ್ಯಮಾಪನವನ್ನು ಮಾರಾಟದ ಮೊದಲು ಮಾಡಲಾಗಿಲ್ಲ. ಅಲ್ಲದೆ 1985ರಲ್ಲಿ ಕಾಂಗ್ರೆಸ್ ಶತಮಾನೋತ್ಸವದ ಸಂದರ್ಭದಲ್ಲಿ ಭಾವಚಿತ್ರವನ್ನು ಅಂದಿನ ಪ್ರಧಾನ ಮಂತ್ರಿಗೆ ಉಡುಗೊರೆಯಾಗಿ ನೀಡಲಾಯಿತು. ಅದು ಪಕ್ಷದ ಆಸ್ತಿಯಾಗಿದೆ ಎಂದು ಅಧಿಕಾರಿಗಳು ನಿನ್ನೆ ಹೇಳಿದ್ದರು.
ಪ್ರಿಯಾಂಕಾ ಗಾಂಧಿ ಕೂಡ 2010ರ ಜೂನ್ 4ರಂದು ಒಂದು ಸ್ವೀಕೃತಿ ಪತ್ರ ಸಹ ಬರೆದು ಚೆಕ್ ಸಹ ಕಳುಹಿಸಿದ್ದಾರೆ.
ಪ್ರಿಯಾಂಕಾ ಗಾಂಧಿಯವರು ತಮ್ಮ ಪತ್ರದಲ್ಲಿ, ಎಂ.ಎಫ್. ಹುಸೇನ್ ಅವರು ಚಿತ್ರಿಸಿದ ನನ್ನ ತಂದೆ ರಾಜೀವ್ ಗಾಂಧಿಯವರ ಭಾವಚಿತ್ರವನ್ನು 1985ರಲ್ಲಿ ಕಾಂಗ್ರೆಸ್ ಶತಮಾನೋತ್ಸವ ಸಮಾರಂಭದಲ್ಲಿ ಪ್ರಸ್ತುತಪಡಿಸಿದ್ದಕ್ಕಾಗಿ ಧನ್ಯವಾದಗಳು. ಪ್ರಸ್ತುತ ಅದು ನನ್ನ ವಶದಲ್ಲಿದೆ ಎಂದು ಉಲ್ಲೇಖಿಸಿದ್ದಾರೆ.
ಲುಕ್ಔಟ್ ನೋಟಿಸ್
ಯೆಸ್‌ಬ್ಯಾಂಕ್ ಸಂಸ್ಥಾಪಕ ರಾಣಾ ಕಪೂರ್, ಅವರ ಪತ್ನಿ ಬಿಂದು ರಾಣಾ ಕಪೂರ್, ಪುತ್ರಿಯರಾದ ರೋಶ್ನಿ ಕಪೂರ್, ರಾಖೀ ಕಪೂರ್ ಟಂಡನ್ ಮತ್ತು ಡಿಎಚ್‌ಎಫ್ಎಲ್ ಅಧ್ಯಕ್ಷ ಎಂಡಿ ರಾಧಾ ಕಪೂರ್ ಮತ್ತು ಆರ್‌ಕೆಡಬ್ಲ್ಯು ಡೆವಲಪರ್ಸ್ ಪ್ರೈವೇಟ್ ಲಿಮಿಟೆಡ್ ನಿರ್ದೇಶಕ ಧೀರಜ್ ರಾಜವನ್ ಕುಮಾರ್ ವಿರುದ್ಧ ಸಿಬಿಐ ಲುಕ್ಔಟ್ ನೋಟಿಸ್ ಹೊರಡಿಸಿದೆ.