ಮುಂಬೈ: ಯೆಸ್ ಬ್ಯಾಂಕ್ ಸಂಸ್ಥಾಪಕ ರಾಣಾ ಕಪೂರ್ ಹಾಗೂ ಇತರರ ವಿರುದ್ಧ ಅಕ್ರಮ ಹಣ ವರ್ಗಾವಣೆ ಪ್ರಕರಣದಡಿ ದೂರು ದಾಖಲಿಸಿಕೊಂಡ ಜಾರಿ ನಿರ್ದೇಶನಾಲಯ (ಇಡಿ), ಇಂದೂ ಕೂಡ ವಿಚಾರಣೆ ಮುಂದುವರಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಯೆಸ್ ಬ್ಯಾಂಕ್ ಹಣಕಾಸಿನ ಬಿಕ್ಕಟ್ಟಿಗೆ ಸಂಬಂಧಿಸಿದಂತೆ ಕಪೂರ್ ಅವರ ವರ್ಲಿ ಪ್ರದೇಶದ ಸಮುದ್ರ ಮಹಲ್ ಕಾಂಪ್ಲೆಕ್ಸ್ನಲ್ಲಿರುವ ಮನೆಯ ಮೇಲೆ ಜಾರಿ ನಿರ್ದೇಶನಾಲಯ ಶುಕ್ರವಾರ ತಡರಾತ್ರಿ ದಾಳಿ ಮಾಡಿ, ಶೋಧ ಕಾರ್ಯ ನಡೆಸಿತ್ತು.
ಕಪೂರ್ ಅವರನ್ನು ಇಡಿ ಅಧಿಕಾರಿಗಳು ಬಲಾರ್ಡ್ ಎಸ್ಟೇಟ್ ಪ್ರದೇಶದ ಕಚೇರಿಗೆ ಕರೆತಂದು ತೀವ್ರ ವಿಚಾರಣೆಗೆ ಒಳಪಡಿಸಿದ್ದಾರೆ. ಈ ವಿಚಾರಣೆ ಈಗಲೂ ಮುಂದುವರಿದಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಕಪೂರ್ ವಿರುದ್ಧದ ಪ್ರಕರಣವು ಹಗರಣ ಪೀಡಿತ ಡಿಎಚ್‌ಎಫ್‌ಎಲ್‌ಗೆ ಸಂಬಂಧಿಸಿದ್ದು, ಕಂಪನಿಗೆ ಬ್ಯಾಂಕ್ ನೀಡಿದ ಸಾಲ ವಸೂಲಾತಿಯಾಗದೆ (ಎನ್ಪಿಎ) ಬಾಕಿ ಉಳಿದುಕೊಂಡಿದೆ. ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆ (ಪಿಎಂಎಲ್‌ಎ) ಅಡಿಯಲ್ಲಿ ಪ್ರಕರಣದ ವಿಚಾರಣೆ ನಡೆಯುತ್ತಿದೆ. ಕೆಲವು ಕಾರ್ಪೊರೇಟ್ ಸಂಸ್ಥೆಗಳಿಗೆ ಸಾಲ ವಿತರಣೆಗೆ ಸಂಬಂಧಿಸಿದಂತೆ ಕಪೂರ್ ಅವರ ಪಾತ್ರವನ್ನು ಕೇಂದ್ರ ಸಂಸ್ಥೆ ಪರಿಶೀಲಿಸುತ್ತಿದೆ ಎಂದರು.
ಕಾರ್ಪೊರೇಟ್ ಘಟಕಗಳಿಗೆ ಸಾಲ ವಿತರಣೆಯ ಬಳಿಕ ನಂತರ ಪತ್ನಿಯ ಖಾತೆಗಳಿಗೆ ಕಿಕ್‌ಬ್ಯಾಕ್ ಸಲ್ಲಿಕೆ ಆಗಿರುವುದು ಅಧಿಕಾರಿಗಳ ಗಮನಕ್ಕೆ ಬಂದಿದೆ. ಇದರಲ್ಲಿ ಅವರ ಪತ್ನಿಯ ಪಾತ್ರ ಏನೂ ಎಂಬುದರ ಬಗ್ಗೆಯೂ ಕೇಂದ್ರ ಏಜೆನ್ಸಿಯು ಕಪೂರ್ ಅವರ ಪಾತ್ರವನ್ನು ಪರಿಶೀಲಿಸುತ್ತಿದೆ. ಉತ್ತರ ಪ್ರದೇಶದ ವಿದ್ಯುತ್ ನಿಗಮದಲ್ಲಿನ ಪಿಎಫ್ ವಂಚನೆಯ ಕುರಿತು ಪ್ರಶ್ನಿಸುತ್ತಿದ್ದಾರೆ ಎಂದು ವಿವರಿಸಿದರು.
ಕೇಂದ್ರೀಯ ತನಿಖಾ ತಂಡ (ಸಿಬಿಐ) ಇತ್ತೀಚೆಗೆ ಉತ್ತರ ಪ್ರದೇಶದ ಉದ್ಯೋಗಿಗಳ ಭವಿಷ್ಯ ನಿಧಿಯ ಸುಮಾರು ₹ 2,260 ಕೋಟಿ ವಂಚನೆ ಪ್ರಕರಣದ ಬಗ್ಗೆ ತನಿಖೆ ನಡೆಸುತ್ತಿದೆ. ವಿದ್ಯುತ್ ನಿಗಮದ ಉದ್ಯೋಗಿಗಳ ಗಳಿಕೆಯ ಹಣವನ್ನು ದಿವಾನ್ ಹೌಸಿಂಗ್ ಫೈನಾನ್ಸ್ ಕಾರ್ಪೊರೇಷನ್ನಲ್ಲಿ (ಡಿಎಚ್ಎಫ್ಎಲ್) ಹೂಡಿಕೆ ಮಾಡಲಾಗಿತ್ತು ಎಂಬ ಮಾಹಿತಿ ದೊರೆತಿದೆ.