ನವದೆಹಲಿ: ಅಕ್ಟೋಬರ್ 7ರಿಂದ ಜಾರಿಗೆ ಬರುವಂತೆ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್‌ಬಿಐ) ವ್ಯವಸ್ಥಾಪಕ ನಿರ್ದೇಶಕ ದಿನೇಶ್ ಕುಮಾರ್ ಖರಾರನ್ನು ಎಸ್‌ಬಿಐ ಅಧ್ಯಕ್ಷರನ್ನಾಗಿ ಸರ್ಕಾರ ನೇಮಿಸಿದೆ.
ದಿನೇಶ್ ಕುಮಾರ್ ಖಾರಾ ಅವರು 7.10.2020ರಂದು ಅಥವಾ ನಂತರ ಹುದ್ದೆಯ ಉಸ್ತುವಾರಿ ವಹಿಸಿಕೊಂಡ ದಿನಾಂಕದಿಂದ 3 ವರ್ಷಗಳ ಅವಧಿಗೆ ಬ್ಯಾಂಕಿನ ಅಧ್ಯಕ್ಷರಾಗಿ ನೇಮಕಗೊಂಡಿದ್ದಾರೆ ಎಂದು ಕೇಂದ್ರ ಹಣಕಾಸು ಸಚಿವರು ಅಧಿಸೂಚನೆ ಹೊರಡಿಸಿದ್ದಾರೆ.
ಹಾಲಿ ಅಧ್ಯಕ್ಷ ರಜನೀಶ್ ಕುಮಾರ್ ಅವರ ಅವಧಿ ಮುಕ್ತಾಯಗೊಂಡಿರುವ ಕಾರಣ ಎಸ್‌ಬಿಐಗೆ ಸೂನತ ಅಧ್ಯಕ್ಷರನ್ನು ಸರ್ಕಾರ ನೇಮಕ ಮಾಡಿದೆ. ಆಗಸ್ಟ್ 28ರಂದು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಅಧ್ಯಕ್ಷ ಹುದ್ದೆಗೆ ದಿನೇಶ್ ಕುಮಾರ್ ಖಾರಾ ಅವರನ್ನು ನೇಮಕ ಮಾಡಲು ಬ್ಯಾಂಕ್ ಬೋರ್ಡ್ ಬ್ಯೂರೋ ಶಿಫಾರಸು ಮಾಡಿತ್ತು.
ಖಾರಾ ಅವರು 1984ರಲ್ಲಿ ಎಸ್‌ಬಿಐಗೆ ಪ್ರೊಬೇಷನರಿ ಅಧಿಕಾರಿಯಾಗಿ ಸೇರಿಕೊಂಡರು. ಚಿಲ್ಲರೆ ಸಾಲ, ಕಾರ್ಪೋರೇಟ್ ಕ್ರೆಡಿಟ್, ಠೇವಣಿ ಕ್ರೋಢೀಕರಣ, ಅಂತಾರಾಷ್ಟ್ರೀಯ ಬ್ಯಾಂಕಿಂಗ್ ಕಾರ್ಯಾಚರಣೆಗಳು ಮತ್ತು ಶಾಖಾ ನಿರ್ವಹಣೆಯಂತಹ ವಾಣಿಜ್ಯ ಬ್ಯಾಂಕಿಂಗ್‌ನ ಎಲ್ಲಾ ಆಯಾಮಗಳಲ್ಲಿ 33 ವರ್ಷಗಳ ಅನುಭವವನ್ನು ಹೊಂದಿದ್ದಾರೆ.