ನವದೆಹಲಿ: ಕೊರೊನಾ ಸೋಂಕು ಮತ್ತು ಲಾಕ್‌ಡೌನ್ ಜಾರಿಯಿಂದ ಈಗಾಗಲೇ ಪೆಟ್ರೋಲ್, ವಾಹನ, ಕೋಳಿ ಮಾಂಸ, ಜವಳಿ ಮಾರಾಟ ಕುಸಿದಿದೆ. ದಿನಸಿ ಸಾಮಗ್ರಿಗಳ ಸಾಲಿನ ಅಡುಗೆ ಎಣ್ಣೆಯ ಮಾರಾಟ ಮತ್ತು ಉತ್ಪಾದನೆಯಲ್ಲಿ ಗಮನಾರ್ಹ ಇಳಿಕೆ ಕಂಡುಬಂದಿದೆ.
ಫಾರ್ಚೂನ್ ಬ್ರಾಂಡ್ ಅಡಿ ಖಾದ್ಯ ತೈಲಗಳನ್ನು ಮಾರಾಟ ಮಾಡುವ ಅದಾನಿ ವಿಲ್ಮಾರ್, ಲಾಕ್‌ಡೌನ್‌ನಲ್ಲಿನ ಕಾರ್ಮಿಕ ಕೊರತೆಯಿಂದಾಗಿ ಅಡುಗೆ ಎಣ್ಣೆಗಳ ಉತ್ಪಾದನೆಯು ಶೇ 40ರಷ್ಟು ಕಡಿಮೆಯಾಗಿದೆ. ಇದರಿಂದಾಗಿ ಅಗತ್ಯ ಸರಕುಗಳ ಸರಬರಾಜಿನಲ್ಲಿ ಬಿಗಿಯಾದ ನಡೆಗಳು ಕಂಡುಬರುತ್ತಿದೆ.
ಕೋವಿಡ್ -19 ನಿಯಂತ್ರಿಸಲು ಲಾಕ್‌ಡೌನ್ ಆಗಿರುವುದರಿಂದ ಎಲ್ಲ ಹೋಟೆಲ್, ರೆಸ್ಟೋರೆಂಟ್ ಮತ್ತು ಕೆಫೆಟೇರಿಯಗಳನ್ನು ಮುಚ್ಚಲಾಗಿದೆ. ಇದರಿಂದ ಅಡುಗೆ ಎಣ್ಣೆಗಳ ಮಾರಾಟ ಶೇ 25ರಷ್ಟು ಕುಸಿದಿದೆ ಎಂದು ಅದಾನಿ ವಿಲ್ಮಾರ್‌ನ ಡೆಪ್ಯುಟಿ ಸಿಇಒ ಆಂಗ್ಶು ಮಲ್ಲಿಕ್ ಹೇಳಿದ್ದಾರೆ.
ನಿತ್ಯ ಸುಮಾರು 8,000 ಟನ್ ಖಾದ್ಯ ತೈಲ ಸಂಸ್ಕರಿಸಿ ಉತ್ಪಾದಿಸುತ್ತಿದ್ದೆವು. ಕಾರ್ಮಿಕರ ಕೊರತೆಯಿಂದಾಗಿ ಉತ್ಪಾದನಾ ಮಟ್ಟವು ಶೇ 40ರಷ್ಟು ಕಡಿಮೆಯಾಗಿದೆ. ಬಹುತೇಕ ವಲಸಿಗ ಕಾರ್ಮಿಕರು ತಮ್ಮ ಊರಿಗೆ ಮರಳಿದ್ದಾರೆ. ಆದರೆ, ಸ್ಥಳೀಯರು ಕೋವಿಡ್ ಸೋಂಕು ತಾಗಬಹುದೆಂಬ ಭಯದಿಂದ ಕೆಲಸ ಮಾಡಲು ಸಿದ್ಧರಿಲ್ಲ ಎಂದು ಹೇಳಿದರು.
ರೈಲ್ವೆ ಮೂಲಕ ಸರಕುಗಳನ್ನು ಸಾಗಿಸಲು ಹೆಚ್ಚಿನ ಕಾರ್ಮಿಕರು ಅಗತ್ಯ ಇರುವುದರಿಂದ ವಿವಿಧ ರಾಜ್ಯಗಳಲ್ಲಿ ಸುಮಾರು 25 ಸಂಸ್ಕರಣಾ ಘಟಕಗಳನ್ನು ಹೊಂದಿರುವ ಕಂಪನಿಯು ಟ್ರಕ್‌ಗಳ ಮೂಲಕ ಅಡುಗೆ ಎಣ್ಣೆ ಸಾಗಿಸುತ್ತಿದೆ.