ಚೆನ್ನೈ: ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ (ಎಸ್‌ಬಿಐ) ಅಧ್ಯಕ್ಷ ರಜನೀಶ್ ಕುಮಾರ್ ಅವರ ಮೇಲೆ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಗುವಾಹಟಿಯಲ್ಲಿ ಇತ್ತೀಚೆಗೆ ವಾಗ್ದಾಳಿ ನಡೆಸಿದ್ದರು ಎಂದು ಆಪಾದಿಸಿರುವ ಅಖಿಲ ಭಾರತ ಬ್ಯಾಂಕ್ ಅಧಿಕಾರಿಗಳ ಒಕ್ಕೂಟ (ಎಐಬಿಒಸಿ), ವಿತ್ತ ಸಚಿವರ ನಡೆಯನ್ನು ಖಂಡಿಸಿದೆ.
ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿರುವ ಆಡಿಯೋ ಕ್ಲಿಪ್ ಉಲ್ಲೇಖಿಸಿದ ಎಐಬಿಒಸಿ ಪ್ರಧಾನ ಕಾರ್ಯದರ್ಶಿ ಸೌಮ್ಯಾ ದತ್ತಾ, ಸೀತಾರಾಮನ್ ಅವರು ಕುಮಾರ್ ಬಗ್ಗೆ ಆ ರೀತಿಯಾಗಿ ಮಾತನಾಡಿದ್ದು ಖಂಡನೀಯ ಎಂದರು.
ಎಐಬಿಒಸಿ ಪತ್ರಿಕಾ ಪ್ರಕಟಣೆಯ ಪ್ರಕಾರ, 2020ರ ಫೆಬ್ರವರಿ 27ರಂದು ಗುವಾಹಟಿಯಲ್ಲಿ ನಡೆದ ಎಸ್‌ಬಿಐ ಫೈನಾನ್ಶಿಯಲ್ ಇನ್‌ಕ್ಲೂಷನ್ ಔಟ್ರೀಚ್ ಕಾರ್ಯಕ್ರಮದಲ್ಲಿ ರಾಜ್ಯ ಹಣಕಾಸು ಸಚಿವ, ಇತರ ಬ್ಯಾಂಕ್ಗಳ ಮುಖ್ಯಸ್ಥರು, ಹಣಕಾಸು ಸೇವೆಗಳ ಇಲಾಖೆಯ ಅಧಿಕಾರಿಗಳು ಭಾಗವಹಿಸಿದ್ದರು. ಅಂದು ಸೀತಾರಾಮನ್ ಅವರು ಎಸ್ ಬಿಐ ಅಧ್ಯಕ್ಷ ರಜನೀಶ್ ಕುಮಾರ್ ಅವರ ಮೇಲೆ ತೀವ್ರ ವಾಗ್ದಾಳಿ ನಡೆಸಿದ್ದರು ಎಂದು ಆರೋಪಿಸಿದೆ.
ರಜನೀಶ್ ಕುಮಾರ್ ಅವರ ಮೇಲೆ ಗರಂ ಆಗಿರುವ ವಿತ್ತ ಸಚಿವೆ, ಸಾಲದ ಮೊತ್ತ ವಿಸ್ತರಿಸುವಲ್ಲಿ ಬ್ಯಾಂಕಿನ ಎಲ್ಲಾ ವೈಫಲ್ಯಗಳಿಗೆ ಅವರೇ ಕಾರಣವೆಂದು ಆಪಾದಿಸಿದ್ದಾರೆ. ವಿಶೇಷವಾಗಿ ಅಸ್ಸಾಂ ರಾಜ್ಯದ ಟೀ ಎಸ್ಟೇಟ್ ಕಾರ್ಮಿಕರಿಗೆ ನೀಡದ ಸಾಲಕ್ಕಾಗಿ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾವನ್ನು 'ಹೃದಯರಹಿತ ಬ್ಯಾಂಕ್' ಎಂಬ ಬ್ರಾಂಡ್ ಮಾಡಲು ಹೋದರು. ವೇದಿಕೆಯಲ್ಲಿ ದೇಶದ ಅತಿದೊಡ್ಡ ಬ್ಯಾಂಕಿನ ಅಧ್ಯಕ್ಷ ರಜನೀಶ್ ಕುಮಾರ್ ಅವರನ್ನು ಅಕ್ಷರಶಃ ಅವಮಾನಿಸಿದರು ಎಂದು ದತ್ತಾ ಹೇಳಿಕೆಯಲ್ಲಿ ಆಪಾದಿಸಿದ್ದಾರೆ.
ಈ ಬಗೆಗಿನ ಇಡೀ ಘಟನೆಯ ಧ್ವನಿಮುದ್ರಣ ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡಿದೆ. ಎಸ್‌ಬಿಐನ ಚಿತ್ರಣವನ್ನು ಕೆಣಕಿ ಉದ್ದೇಶಪೂರ್ವಕವಾಗಿ ಕಳಂಕಿತಗೊಳಿಸುವಂತೆ ತೋರುತ್ತಿದೆ ಎಂದು ಉಲ್ಲೇಖಿಸಿದ್ದಾರೆ.
ಹೆಸರು ಹೇಳಲು ಇಚ್ಛಿಸದ ಒಕ್ಕೂಟದ ಸದಸ್ಯರೊಬ್ಬರ ಸುದ್ದಿ ಸಂಸ್ಥೆ ಐಎಎನ್‌ಎಸ್‌ನೊಂದಿಗೆ ಮಾತನಾಡಿ, ಟೀ ತೋಟದ ಹಲವು ಕಾರ್ಮಿಕರ ಜನ್ ಧನ್ ಖಾತೆಗಳನ್ನು ಅವರ ಕೆವೈಸಿ (ನಿಮ್ಮ ಗ್ರಾಹಕರನ್ನು ತಿಳಿದುಕೊಳ್ಳಿ) ಪರಿಶೀಲಿಸದ ಹಿನ್ನೆಲೆಯಲ್ಲಿ ಖಾತೆಗಳು ಸ್ಥಗಿತಗೊಂಡಿದ್ದರಿಂದ ಕೇಂದ್ರ ಹಣಕಾಸು ಸಚಿವರು ಅಸಮಾಧಾನಗೊಂಡಿರಬಹುದು. ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ನಿಯಮಗಳಿಗೆ ಅನುಗುಣವಾಗಿವೆಯೇ ಎಂಬುದನ್ನು ಪರಿಶೀಲಿಸಿರಲಿಲ್ಲ ಎಂದರು.
ಉನ್ನತ ಮಟ್ಟದ ರಾಜ್ಯ ಶೃಂಗಸಭೆಯಲ್ಲಿ ಎಸ್‌ಬಿಐ ಅಧ್ಯಕ್ಷರನ್ನು ಸೀತಾರಾಮನ್ ಅವಮಾನಿಸಿದ್ದು ಶೋಚನೀಯ. ಸಂವಿಧಾನದ 12 ನೇ ಪರಿಚ್ಛೇಧದಲ್ಲಿ ಉಲ್ಲೇಖಿಸಿರುವಂತೆ ಬ್ಯಾಂಕ್ ದೇಶದ ಅಧೀನಕ್ಕೆ ಒಳಪಟ್ಟಿದೆ ಎಂಬುದು ಹೇಳುತ್ತದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.