ನವದೆಹಲಿ: ಹಬ್ಬದ ಋತುವಿಗೂ ಮುಂಚಿತವಾಗಿ ದೇಶದಲ್ಲಿ ತನ್ನ ಕಾರ್ಯಾಚರಣೆ ಜಾಲದಾದ್ಯಂತ 1 ಲಕ್ಷಕ್ಕೂ ಹೆಚ್ಚು ಉದ್ಯೋಗಾವಕಾಶ ಸೃಷ್ಟಿಸಿದೆ ಎಂದು ಅಮೆಜಾನ್ ಇಂಡಿಯಾ ಹೇಳಿದೆ.
ಮುಂದಿನ ಕೆಲವೇ ದಿನಗಳಲ್ಲಿ ಹೊಸ ಸಹವರ್ತಿಗಳು ಅಮೆಜಾನ್ ನೆಟ್‌ವರ್ಕ್‌ಗೆ ಸೇರ್ಪಡೆ ಆಗಲಿದ್ದಾರೆ. ಗ್ರಾಹಕರ ಆರ್ಡರ್ಗಳ ಸುರಕ್ಷತೆ ಮತ್ತು ಪರಿಣಾಮಕಾರಿ ಆಯ್ಕೆ, ಪ್ಯಾಕಿಂಗ್, ಸಾಗಣೆ ಹಾಗೂ ಡೆಲಿವರಿಗೆ ಬೆಂಬಲ ನೀಡಲಿದ್ದಾರೆ ಎಂದು ಕಂಪನಿ ಪ್ರಕಟಣೆಯಲ್ಲಿ ತಿಳಿಸಿದೆ.
ಹೊಸ ನೌಕರರು ವಿತರಣಾ ಅನುಭವವನ್ನು ಹೆಚ್ಚಿಸಲು ನೆರವಾಗಲಿದ್ದಾರೆ. ಈ ಹಬ್ಬದ ಋತುವಿನಲ್ಲಿ ಗ್ರಾಹಕರ ಬೇಡಿಕೆ ಏರಿಕೆಯನ್ನು ಪೂರೈಸಲು ಕಂಪನಿಯ ಈಡೇರಿಕೆ ಮತ್ತು ವಿತರಣಾ ಸಾಮರ್ಥ್ಯ ಹೆಚ್ಚಿಸಲು ಸಹಾಯಕವಾಗಲಿದ್ದಾರೆ ಎಂದು ಹೇಳಿದೆ.
ಹಬ್ಬದ ಸೀಸನ್ನ ಬೇಡಿಕೆಗೆ ಬೆಂಬಲವಾಗಿ ಕಂಪನಿಯು ತನ್ನ ಪಾಲುದಾರ ನೆಟ್‌ವರ್ಕ್‌ಗಳಾದ ಟ್ರಾಕ್ಕಿಂಗ್ ಪಾಲುದಾರರು, ಪ್ಯಾಕೇಜಿಂಗ್ ಮಾರಾಟಗಾರರು, ‘ಐ ಹ್ಯಾವ್ ಸ್ಪೇಸ್’ ವಿತರಣಾ ಪಾಲುದಾರರು, ಅಮೆಜಾನ್ ಫ್ಲೆಕ್ಸ್ ಪಾಲುದಾರರು ಮತ್ತು ಹೌಸ್ ಕೀಪಿಂಗ್ ಏಜೆನ್ಸಿಗಳ ಮೂಲಕ ಹತ್ತಾರು ಪರೋಕ್ಷ ಅವಕಾಶಗಳನ್ನು ಸೃಷ್ಟಿಸಿದೆ.
ತಂತ್ರಜ್ಞಾನ, ಮೂಲಸೌಕರ್ಯ ಮತ್ತು ಲಾಜಿಸ್ಟಿಕ್ಸ್ ನೆಟ್‌ವರ್ಕ್‌ನಲ್ಲಿ ನಿರಂತರ ಹೂಡಿಕೆಯ ಮೂಲಕ 2025ರ ವೇಳೆಗೆ ಭಾರತದಲ್ಲಿ 10 ಲಕ್ಷ ಹೊಸ ಉದ್ಯೋಗಾವಕಾಶಗಳನ್ನು ಸೃಷ್ಟಿಸುವುದಾಗಿ ಭರವಸೆ ನೀಡಿದೆ.