ನವದೆಹಲಿ: ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಮತ್ತು ನ್ಯಾಷನಲ್ ಪೇಮೆಂಟ್ಸ್ ಕಾರ್ಪೊರೇಷನ್ ಆಫ್ ಇಂಡಿಯಾ ಹೊರಡಿಸಿರುವ ಮಾರ್ಗಸೂಚಿಗಳಲ್ಲಿ ತಿಳಿಸಲಾದ ಪ್ರಕ್ರಿಯೆಗಳಿಗೆ ಬದ್ಧವಾಗಿ ಬಳಕೆದಾರರ ವಹಿವಾಟುಗಳನ್ನು ಸಂಪೂರ್ಣವಾಗಿ ರಕ್ಷಿಸಲಾಗಿದೆ ಎಂದು ಗೂಗಲ್ ಪೇ ತಿಳಿಸಿದೆ.
ಸಾಮಾಜಿಕ ಮಾಧ್ಯಮದಲ್ಲಿನ ಕೆಲವು ಉಲ್ಲೇಖಗಳಿಂದಾಗಿ ಆರ್‌ಬಿಐಗೆ ತಪ್ಪು ಮಾಹಿತಿ ರವಾನೆ ಆಗಿದೆ. ಗೂಗಲ್ ಪೇ ಮೂಲಕ ಹಣ ವರ್ಗಾವಣೆ ಮಾಡುವಾಗ ಉಂಟಾಗುವ ಸಮಸ್ಯೆಗಳು ಕಾನೂನಿನಿಂದ ರಕ್ಷಿಸಲ್ಪಟ್ಟಿಲ್ಲ ಎಂದು ಹೇಳಿ ಅನಧಿಕೃತ ಆ್ಯಪ್ ಎನ್ನಲಾಗುತ್ತಿದೆ. ಇದು ಸತ್ಯಕ್ಕೆ ದೂರವಾದದ್ದು. ಈ ಬಗ್ಗೆ ಎನ್‌ಪಿಸಿಐ ವೆಬ್‌ಸೈಟ್‌ನಲ್ಲಿ ಪರಿಶೀಲಿಸಬಹುದು ಗೂಗಲ್ ವಕ್ತಾರರು ಹೇಳಿದ್ದಾರೆ.
ಗೂಗಲ್ ಪೇ ಅಪ್ಲಿಕೇಷನ್ ಬಗ್ಗೆ ನ್ಯಾಯಾಲಯದ ವಿಚಾರಣೆಯಲ್ಲಾಗಲಿ ಅಥವಾ ದೆಹಲಿ ಹೈಕೋರ್ಟ್‌ಗೆ ಲಿಖಿತ ಪ್ರತಿಕ್ರಿಯೆಯಲ್ಲಿ ಕೂಡ ಅನಧಿಕೃತ ಅಥವಾ ಕಾನೂನುಬದ್ಧವಾದ ಅನುಸರಣೆ ಹೊಂದಿಲ್ಲ ಎಂದು ಆರ್‌ಬಿಐ ಹೇಳಿಲ್ಲವೆಂದು ಸ್ಪಷ್ಟನೆ ನೀಡಿದರು.
ಗೂಗಲ್ ಪೇ ಮೂರನೇ ವ್ಯಕ್ತಿಯ ಅಪ್ಲಿಕೇಷನ್ ಪೂರೈಕೆದಾರರಾಗಿದ್ದು, ಯಾವುದೇ ಪಾವತಿ ವ್ಯವಸ್ಥೆಯನ್ನು ನಿರ್ವಹಿಸುವುದಿಲ್ಲ ಎಂದು ಈ ತಿಂಗಳ ಆರಂಭದಲ್ಲಿ ಆರ್‌ಬಿಐ ದೆಹಲಿ ಹೈಕೋರ್ಟ್‌ಗೆ ತಿಳಿಸಿತ್ತು.
ಆದ್ದರಿಂದ, ಅದರ ಕಾರ್ಯಾಚರಣೆಗಳು 2007 ರ ಪಾವತಿ ಮತ್ತು ವಸಾಹತು ವ್ಯವಸ್ಥೆಯ ಕಾಯ್ದೆಯನ್ನು ಉಲ್ಲಂಘಿಸಿಲ್ಲ ಎಂದು ಆರ್‌ಬಿಐ ಪರ ವಕೀಲರು ಮುಖ್ಯ ನ್ಯಾಯಮೂರ್ತಿ ಡಿ ಎನ್ ಪಟೇಲ್ ಮತ್ತು ನ್ಯಾಯಮೂರ್ತಿ ಪ್ರತೀಕ್ ಜಲನ್ ಅವರ ನ್ಯಾಯಪೀಠಕ್ಕೆ ತಿಳಿಸಿದ್ದರು.
ಗೂಗಲ್ ಪೇ ಸಂಪೂರ್ಣವಾಗಿ ಕಾನೂನಿನೊಳಗೆ ಕಾರ್ಯನಿರ್ವಹಿಸುತ್ತದೆ. ಯುಪಿಐ (ಏಕೀಕೃತ ಪಾವತಿ ಇಂಟರ್ಫೇಸ್) ಮೂಲಕ ಪಾವತಿಗಳನ್ನು ಅನುಮತಿಸಲು ಪಾಲುದಾರ ಬ್ಯಾಂಕ್ಗಳಿಗೆ ತಂತ್ರಜ್ಞಾನ ಸೇವೆ ಒದಗಿಸುವವರಾಗಿ ಕಾರ್ಯನಿರ್ವಹಿಸುತ್ತದೆ. ದೇಶದಲ್ಲಿ ಯುಪಿಐ ಅಪ್ಲಿಕೇಷನ್‌ಗಳನ್ನು 'ಥರ್ಡ್ ಪಾರ್ಟಿ ಅಪ್ಲಿಕೇಷನ್‌ಗಳು' ಎಂದು ವರ್ಗೀಕರಿಸಲಾಗಿದೆ ಎಂದು ಗೂಗಲ್ ವಕ್ತಾರರು ಹೇಳಿದ್ದಾರೆ.