ನವದೆಹಲಿ: ಆರ್ಥಿಕ ಸಂಕಷ್ಟದಲ್ಲಿ ಇರುವ ಸರ್ಕಾರಿ ಸ್ವಾಮ್ಯದ 'ಏರ್ ಇಂಡಿಯಾವನ್ನು ಖಾಸಗೀಕರಣಗೊಳಿಸದಿದ್ದರೇ ಮುಚ್ಚಬೇಕಾಗುತ್ತದೆ' ಎಂದು ನಾಗರಿಕ ವಿಮಾನಯಾನ ಸಚಿವ ಹರ್ದೀಪ್ ಸಿಂಗ್ ಪುರಿ ಹೇಳಿದ್ದಾರೆ.
ಬುಧವಾರ ಲೋಕಸಭೆಯಲ್ಲಿ ಸದಸ್ಯರ ಪ್ರಶ್ನೆಗೆ ಉತ್ತರಿಸಿ ಮಾತನಾಡಿದ ಅವರು, ರಾಷ್ಟ್ರೀಯ ವಾಹಕ ಏರ್ ಇಂಡಿಯಾ ಖಾಸಗೀಕರಣಕ್ಕೆ ಒಳಪಡಿಸದಿದ್ದರೇ ಮುಚ್ಚಬೇಕಾಗುತ್ತದೆ. ಆದರೆ, ಎಲ್ಲ ಉದ್ಯೋಗಿಗಳಿಗೆ ಅನುಕೂಲಕರವಾದ ಒಪ್ಪಂದ ಮಾಡಿಕೊಳ್ಳುತ್ತೇವೆ ಎಂದು ಭರವಸೆ ನೀಡಿದ್ದಾರೆ.
ರಾಷ್ಟ್ರೀಯ ಸಂಚಾರಿ ಸಂಸ್ಥೆಯಲ್ಲಿನ ತನ್ನ ಸಂಪೂರ್ಣ ಪಾಲನ್ನು ಮಾರಾಟ ಮಾಡಲು ಸರ್ಕಾರ ಬಿಡ್ ದಾಖಲೆಗಳ ಪ್ರತಿಯನ್ನು ಸಿದ್ಧಪಡಿಸುತ್ತಿದೆ. ತನ್ನ ಬಂಡವಾಳ ಹೂಡಿಕೆ ಹಿಂತೆಗೆದುಕೊಳ್ಳುವ ಪ್ರಕ್ರಿಯೆಯನ್ನು ಪೂರ್ಣಗೊಳಿಸಲು ಮಾರ್ಚ್ 31ರವರೆಗೆ ಗಡುವು ಹಾಕಿಕೊಂಡಿದೆ. ಮೋದಿ ಸರ್ಕಾರವು 2018ರ ಮೇ ತಿಂಗಳಲ್ಲಿ ತನ್ನ ಪಾಲಿನ ಶೇ.76ರಷ್ಟು ಪಾಲನ್ನು ಮಾರಾಟ ಮಾಡಲು ಸಂಸ್ಥೆಯ ಷೇರು ಖರೀದಿಗೆ ಆಸಕ್ತಿ ವ್ಯಕ್ತಪಡಿಸಲು (ಇಒಐ) ಆಹ್ವಾನ ನೀಡಿತ್ತು. ಆದರೆ, ಯಾವುದೇ ಖಾಸಗಿ ಘಟಕವು ಮೊದಲ ಹಂತದ ಬಿಡ್ಡಿಂಗ್ ಬಗ್ಗೆ ಆಸಕ್ತಿ ತೋರಿಸಲಿಲ್ಲ.
ಬಿಡ್ ಪ್ರಕ್ರಿಯೆಗಳು ಆರಂಭವಾಗುವ ಮುನ್ನ ವಿಮಾನಯಾನ ಸಚಿವಾಲಯದ ಹಿರಿಯ ಅಧಿಕಾರಿಗಳು ಹಾಗೂ ಏರ್ ಇಂಡಿಯಾ ಮುಖ್ಯಸ್ಥ ಅಶ್ವಿನಿ ಲೋಹನಿ ಇತ್ತೀಚೆಗೆ ಸಭೆ ನಡೆಸಿದ್ದಾರೆ. ಹರ್ದೀಪ್ ಪುರಿ ಕಳೆದ ವಾರ ಸಚಿವರ ಸಮೂಹ (ಜಿಒಎಂ) ಸಭೆ ನಡೆಸಿ ಈ ಬಗ್ಗೆ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದು ಹೇಳಿದ್ದರು.