ಮುಂಬೈ: ಎಲ್ಲಾ ಪ್ರಯಾಣಿಕರಿಗೆ ರೈಲು ಸೇವೆಗಳನ್ನು ಪುನಾರಂಭಿಸಲು ಮಹಾರಾಷ್ಟ್ರ ಸರ್ಕಾರ ನಿರ್ಧರಿಸಿದ್ದು, ಕೋವಿಡ್ -19 ಸಾಂಕ್ರಾಮಿಕ ರೋಗದ ಮಧ್ಯೆ ಫೆಬ್ರವರಿ 1ರಿಂದ ಮುಂಬೈಯಲ್ಲಿ ಸ್ಥಳೀಯ ಸೇವೆ ಪ್ರಾರಂಭಿಸಲು ಪಶ್ಚಿಮ ರೈಲ್ವೆ ಸಜ್ಜಾಗಿದೆ.
ಮಾಧ್ಯಮಗಳೊಂದಿಗೆ ಮಾತನಾಡಿದ ಪಶ್ಚಿಮ ರೈಲ್ವೆಯ ಸಾರ್ವಜನಿಕ ಸಂಪರ್ಕಾಧಿಕಾರಿ ಸುಮಿತ್ ಠಾಕೂರ್, ರೈಲ್ವೆ ಸೇವೆ ಪುನಾರಂಭಿಸುವ ಬಗ್ಗೆ ನಾವು ತಂಡಗಳನ್ನು ರಚಿಸಿದ್ದೇವೆ. ರೈಲುಗಳ ಕ್ಯಾಬಿನ್ ಮತ್ತು ಆಸನಗಳ ಸ್ವಚ್ಛತೆ ಕೆಲಸ ಮಾಡುತ್ತಿದ್ದೇವೆ. ನಾವು ಪ್ರವೇಶ ಮತ್ತು ನಿರ್ಗಮನ ಸ್ಥಳಗಳ ಜೊತೆಗೆ ಟಿಕೆಟ್ ಬುಕ್ಕಿಂಗ್ ಕೌಂಟರ್‌ಗಳ ಸಂಖ್ಯೆ ಹೆಚ್ಚಿಸಿದ್ದೇವೆ. ಜನಸಂದಣಿ ನಿಯಂತ್ರಿಸಲು ರೈಲ್ವೆ ಪೊಲೀಸ್ ಪಡೆ ಅಧಿಕಾರಿಗಳು ಸೇರಿದಂತೆ ನಮ್ಮ ಸಿಬ್ಬಂದಿ ಸಿದ್ಧರಿದ್ದಾರೆ ಎಂದರು.
ಇದನ್ನೂ ಓದಿ: ಬಜೆಟ್ ಅಧಿವೇಶನದ ವಿಘ್ನಗಳ ತಡೆಗೆ ಸರ್ವಪಕ್ಷಗಳ ಜತೆ ಮೋದಿ ಸಭೆ ಇಂದು
ವೈರಸ್ ವಿರುದ್ಧ ಹೋರಾಡಲು ಮತ್ತು ರೈಲುಗಳ ಸುಗಮ ಕಾರ್ಯಾಚರಣೆಯನ್ನು ಖಚಿತಪಡಿಸಿಕೊಳ್ಳಲು ಎಲ್ಲಾ ಮುಂಬೈ ಸ್ಥಳೀಯ ರೈಲು ಪ್ರಯಾಣಿಕರಿಗೆ ಕೋವಿಡ್ 19 ಮಾನದಂಡ ಮತ್ತು ಪ್ರೋಟೋಕಾಲ್ಗಳನ್ನು ಪಾಲಿಸಬೇಕೆಂದು ಮನವಿ ಮಾಡಿದರು.
ಲಾಕ್‌ಡೌನ್ ಪ್ರಾರಂಭವಾದಾಗಿನಿಂದ ಸುಮಾರು ಹತ್ತು ತಿಂಗಳ ಕಾಲ ಮುಂಬೈ ಸ್ಥಳೀಯ ರೈಲು ಸೇವೆಗಳ ಕಾರ್ಯಾಚರಣೆ ಸಾಮಾನ್ಯ ಪ್ರಯಾಣಿಕರಿಗೆ ನಿರ್ಬಂಧಿಸಲಾಗಿತ್ತು.