ನವದೆಹಲಿ: ಸರಕು ಮತ್ತು ಸೇವಾ ತೆರಿಗೆ (ಜಿಎಸ್ಟಿ) ಮಂಡಳಿಯ 41ನೇ ಸಭೆಯು ನಾಳೆ (ಗುರುವಾರ) ವಿಡಿಯೋ ಕಾನ್ಫರೆನ್ಸ್ ಮೂಲಕ ನಡೆಯಲಿದ್ದು, ದ್ವಿಚಕ್ರ ವಾಹನಗಳ ಮೇಲಿನ ತೆರಿಗೆ ಸ್ಲ್ಯಾಬ್ ಕಡಿತಗೊಳ್ಳುವ ಸಾಧ್ಯತೆ ಇದೆ.
ದ್ವಿಚಕ್ರ ವಾಹನಗಳ ಸರಕು ಮತ್ತು ಸೇವಾ ತೆರಿಗೆಯನ್ನು ಕಡಿತಗೊಳಿಸುವ ಪ್ರಸ್ತಾವನೆಯನ್ನು ಜಿಎಸ್ಟಿ ಕೌನ್ಸಿಲ್ ಪರಿಗಣಿಸಲಿದೆ ಎಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರ ಹೇಳಿಕೆಯ ನಂತರ ದ್ವಿಚಕ್ರ ವಾಹನಗಳ ಪ್ರಮುಖ ಕಂಪನಿಗಳಾದ ಹೀರೋ ಮೊಟೊಕಾರ್ಪ್, ಬಜಾಜ್ ಆಟೋ ಮತ್ತು ಟಿವಿಎಸ್ ಮೋಟಾರ್ ಕಂಪನಿಗಳ ಷೇರುಗಳ ಮೌಲ್ಯ ಗಗನಕ್ಕೇರಿತು.
ಮಂಗಳವಾರ ಸಿಐಐ ಸಮ್ಮೇಳನವನ್ನುದ್ದೇಶಿಸಿ ಮಾತನಾಡಿದ ಸೀತಾರಾಮನ್ ಅವರು, ದ್ವಿಚಕ್ರ ವಾಹನಗಳ ಮೇಲಿನ ತೆರಿಗೆ ಕಡಿಮೆ ಮಾಡುವ ಸಲಹೆ ಒಳ್ಳೆಯದು. ಏಕೆಂದರೆ ಈ ವರ್ಗವು ದರ ಪರಿಷ್ಕರಣೆಗೆ ಅರ್ಹವಾಗಿದೆ. ಪರಿಣಾಮವಾಗಿ. ಇದನ್ನು ಜಿಎಸ್ಟಿ ಮಂಡಳಿಯಲ್ಲಿ ಚರ್ಚೆಗೆ ತೆಗೆದುಕೊಳ್ಳಲಾಗುವುದು ಎಂದು ಅಭಯ ನೀಡಿದರು,
ಬೆಳಗ್ಗೆ 10.48ರ ಸುಮಾರಿಗೆ ಹೀರೋ ಮೊಟೊಕಾರ್ಪ್‌ನ ಷೇರು 3,095.40 ರೂ.ಯಲ್ಲಿ ವಹಿವಾಟು ನಡೆಸುತ್ತಿದ್ದು, ಹಿಂದಿನ ಅಂತ್ಯದ ಮೇಲೆ 124.35 ರೂ ಅಥವಾ 4.19ರಷ್ಟು ಹೆಚ್ಚಾಗಿದೆ. ಇದು 52 ವಾರಗಳ ಗರಿಷ್ಠ ಪ್ರತಿ ಏರಿಕೆಯಾಗಿದೆ.
ಬಜಾಜ್ ಆಟೋ ಷೇರು 3,106.85 ರೂ.ಗೆ ವಹಿವಾಟು ನಡೆಸಿದ್ದು, ಹಿಂದಿನ ಕ್ಲೋಸ್‌ಗಿಂತ 96.85 ರೂ ಅಥವಾ ಶೇ 3.22ರಷ್ಟು ಹೆಚ್ಚಾಗಿದೆ. ಟಿವಿಎಸ್ ಮೋಟರ್ ಕಂಪನಿಯ ಷೇರು ಮೌಲ್ಯದಲ್ಲಿ ಶೇ 4.51ರಷ್ಟು ಹೆಚ್ಚಳವಾಗಿ ಪ್ರತಿ ಷೇರಿಗೆ 465.90 ರೂ.ಗೆ ತಲುಪಿದೆ.
ದ್ವಿಚಕ್ರ ವಾಹನಗಳು ಪ್ರಸ್ತುತ ಶೇ 28ರಷ್ಟು ಜಿಎಸ್‌ಟಿಯನ್ನು ಆಕರ್ಷಿಸುತ್ತಿವೆ. ಸ್ಲ್ಯಾಬ್ ದರ ಕಡಿಮೆ ಮಾಡುವಂತೆ ಉದ್ಯಮವು ದೀರ್ಘಕಾಲದಿಂದ ಒತ್ತಾಯಿಸಿಕೊಂಡು ಬರುತ್ತಿದೆ.