ನವದೆಹಲಿ: 2020ರ ಅಕ್ಟೋಬರ್‌ನಲ್ಲಿ ಪ್ರಾರಂಭವಾದ 2020-21ರ ಮಾರುಕಟ್ಟೆ ವರ್ಷದ ಮೊದಲ ಮೂರೂವರೆ ತಿಂಗಳಲ್ಲಿ ದೇಶದ ಸಕ್ಕರೆ ಉತ್ಪಾದನೆಯು ಶೇ 31ರಷ್ಟು ಏರಿಕೆ ಕಂಡು 142.70 ಲಕ್ಷ ಟನ್‌ಗಳಿಗೆ ತಲುಪಿದೆ ಎಂದು ಕೈಗಾರಿಕಾ ಸಂಸ್ಥೆ ಐಎಸ್‌ಎಂಎ ತಿಳಿಸಿದೆ.
ವಿಶ್ವದ ಎರಡನೇ ಅತಿದೊಡ್ಡ ಸಕ್ಕರೆ ಉತ್ಪಾದಕ ರಾಷ್ಟ್ರವಾದ ಭಾರತದಲ್ಲಿ ಸಕ್ಕರೆ ಉತ್ಪಾದನೆಯು 2019-20 ಮಾರುಕಟ್ಟೆ ವರ್ಷದ (ಅಕ್ಟೋಬರ್-ಸೆಪ್ಟೆಂಬರ್) ಜನವರಿ 15ರವರೆಗೆ 108.94 ಲಕ್ಷ ಟನ್‌ಗಳಷ್ಟಿತ್ತು.
ಭಾರತೀಯ ಸಕ್ಕರೆ ಕಾರ್ಖಾನೆಗಳ ಸಂಘ (ಇಸ್ಮಾ) 2020-21ರ ಮಾರುಕಟ್ಟೆ ವರ್ಷದಲ್ಲಿ ಸಕ್ಕರೆ ಉತ್ಪಾದನೆಯು ಶೇ 13ರಷ್ಟು ಹೆಚ್ಚಳವಾಗಿ 310 ಲಕ್ಷ ಟನ್‌ಗಳಿಗೆ ಏರಿಕೆಯಾಗಲಿದೆ ಎಂದು ಅಂದಾಜಿಸಿತ್ತು. ಇತ್ತೀಚಿನ ಉತ್ಪಾದನಾ ನವೀಕರಣ ಬಿಡುಗಡೆ ಮಾಡಿದ ಇಸ್ಮಾ, ಈ ವರ್ಷದಲ್ಲಿ ಇಲ್ಲಿಯವರೆಗೆ ದೇಶದ ಸಕ್ಕರೆ ಉತ್ಪಾದನೆಯು 33.76 ಲಕ್ಷ ಟನ್ನಷ್ಟು ಹೆಚ್ಚಾಗಿದೆ ಎಂದು ಹೇಳಿದೆ.
ಈ ಅವಧಿಯಲ್ಲಿ 487 ಸಕ್ಕರೆ ಕಾರ್ಖಾನೆಗಳ ಪೈಕಿ 440 ಮಿಲ್ಗಳು ಕಾರ್ಯನಿರ್ವಹಿಸುತ್ತಿವೆ ಎಂದು ಹೇಳಿದೆ.
ದೇಶದ ಪ್ರಮುಖ ಉತ್ಪಾದನಾ ರಾಜ್ಯವಾದ ಉತ್ತರಪ್ರದೇಶದಲ್ಲಿ ಸಕ್ಕರೆ ಉತ್ಪಾದನೆಯು ಈ ಮಾರುಕಟ್ಟೆ ವರ್ಷದ ಜನವರಿ 15ರವರೆಗೆ 42.99 ಲಕ್ಷ ಟನ್‌ಗಳಷ್ಟಾಗಿದ್ದು, ಹಿಂದಿನ ವರ್ಷದ ಇದೇ ಅವಧಿಯಲ್ಲಿನ 43.78 ಲಕ್ಷ ಟನ್‌ಗಳಿಗಿಂತ ಅಲ್ಪ ಕಡಿಮೆಯಾಗಿದೆ. ಕಡಿಮೆ ಕಬ್ಬಿನ ಇಳುವರಿ ಮತ್ತು ಕಡಿಮೆ ಸಕ್ಕರೆ ಮರುಪಡೆಯುವಿಕೆಯಿಂದ ಇದು ಸಂಭವಿಸಿದೆ.
ಇದನ್ನೂ ಓದಿ: 46 ನಕಲಿ ಕಂಪನಿ ಸೃಷ್ಟಿಸಿದ್ದ ಆರೋಪಿಯ ಬಂಧಿಸಿದ ಜಿಎಸ್ಟಿ ಅಧಿಕಾರಿಗಳು
ದೇಶದ ಎರಡನೇ ಅತಿದೊಡ್ಡ ಸಕ್ಕರೆ ಉತ್ಪಾದಕ ರಾಜ್ಯವಾದ ಮಹಾರಾಷ್ಟ್ರದ ಉತ್ಪಾದನೆಯು ಈ ಅವಧಿಯಲ್ಲಿ 25.51 ಲಕ್ಷ ಟನ್ನಿಂದ 51.55 ಲಕ್ಷ ಟನ್ಗೆ ಏರಿದೆ. ಮೂರನೇ ಅತಿದೊಡ್ಡ ಸಕ್ಕರೆ ಉತ್ಪಾದಿಸುವ ಕರ್ನಾಟಕದ ಉತ್ಪಾದನೆಯು ಇದೇ ಅವಧಿಯಲ್ಲಿ 29.80 ಲಕ್ಷ ಟನ್‌ಗಳಿಗೆ ಏರಿಕೆಯಾಗಿದೆ. ಇದು ಹಿಂದಿನ ವರ್ಷ 21.90 ಲಕ್ಷ ಟನ್‌ಗಳಷ್ಟಿತ್ತು.
ಗುಜರಾತ್‌ನಲ್ಲಿ ಉತ್ಪಾದನೆ 4.40 ಲಕ್ಷ ಟನ್, ತಮಿಳುನಾಡಿನಲ್ಲಿ 1.15 ಲಕ್ಷ ಟನ್ ತಲುಪಿದ್ದರೆ, ಉಳಿದ ರಾಜ್ಯಗಳಾದ ಆಂಧ್ರಪ್ರದೇಶ ಮತ್ತು ತೆಲಂಗಾಣ, ಬಿಹಾರ, ಉತ್ತರಾಖಂಡ, ಪಂಜಾಬ್, ಹರಿಯಾಣ ಮತ್ತು ಮಧ್ಯಪ್ರದೇಶ, ಛತ್ತೀಸ್‌ಗಢ, ರಾಜಸ್ಥಾನ, ಒಡಿಶಾ ಒಟ್ಟಾರೆಯಾಗಿ 12.81 ಲಕ್ಷ ಟನ್ ಸಕ್ಕರೆ ಉತ್ಪಾದಿಸಿವೆ ಎಂದು ಇಸ್ಮಾ ತಿಳಿಸಿದೆ.