ವಾಷಿಂಗ್ಟನ್: ಚೀನಾ-ಅಮೆರಿಕ ನಡುವಿನ ವಾಣಿಜ್ಯ ಸಮರ ಮುಗಿಯುವ ಲಕ್ಷಣ ಕಾಣಿಸುತ್ತಿಲ್ಲ. ಕೆಲವು ತಿಂಗಳ ಹಿಂದೆ ವಾಣಿಜ್ಯಾತ್ಮಕ ವಿವಾದ ಬಗೆಹರಿಸಿಕೊಳ್ಳುವ ಮಾತುಕತೆ ನಡೆದಿತ್ತು. ಈಗ ಅದೇ ಮಾತುಕತೆಯ ವೇದಿಕೆ ಉಭಯ ರಾಷ್ಟ್ರಗಳ ಮಧ್ಯೆ ವಾಣಿಜ್ಯ ಸಮರ ಹೆಚ್ಚಿಸುತ್ತಿದೆ.
ಎರಡು ರಾಷ್ಟ್ರಗಳ ನಡುವಿನ ಮಾತುಕತೆಗೆ ಒತ್ತಡ ಹೇರಲು 200 ಶತಕೋಟಿ ಡಾಲರ್ ಮೌಲ್ಯದ ಚೀನಾ ಸರಕುಗಳ ಮೇಲಿನ ಸುಂಕವನ್ನು ಹೆಚ್ಚಿಸಲು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನಿರ್ಧರಿಸಿದ್ದಾರೆ.
ಈ ಕುರಿತ ಅಂತಿಮ ತೀರ್ಮಾನ ಮುಂದಿನ ವಾರ ಹೊರಬೀಳುವ ಸಾಧ್ಯತೆಗಳಿವೆ. ಚೀನಾ ಅಮೆರಿಕ ನಡುವಿನ ವಾಣಿಜ್ಯ ಉದ್ವಿಗ್ನತೆ ಪರಿಸ್ಥಿತಿಯು ಜಾಗತಿಕ ಆರ್ಥಿಕತೆ ಮೇಲೆ ನಕರಾತ್ಮಕ ಪ್ರಭಾವ ಬೀರುವ ಸಾಧ್ಯತೆ ದಟ್ಟವಾಗಿದೆ ಎಂದು ವಿಶ್ಲೇಷಿಸಲಾಗುತ್ತಿದೆ.
ಅಮೆರಿಕ ಈ ಬೆದರಿಕೆಗೆ ತುಸು ಮಣಿದಿರುವ ಚೀನಾ, ಮಾತುಕತೆಗೆ ತಮ್ಮ ವಾಣಿಜ್ಯ ರಾಯಭಾರಿಯನ್ನು ಅಮೆರಿಕಕ್ಕೆ ಕಳಿಸಲು ಮುಂದಾಗಿದೆ. ಮಾತುಕತೆಯಲ್ಲಿನ ಬೆಳವಣಿಗೆ ಬಿಂಬಿಸುವಂತೆ ತಮ್ಮ ಪ್ರತಿನಿಧಿಯನ್ನು ಅಮೆರಿಕಕ್ಕೆ ಕಳಿಸುತ್ತೇವೆ ಎಂದು ಚೀನಾದ ವಿದೇಶಾಂಗ ಸಚಿವಾಲಯ ತಿಳಿಸಿದೆ.