ಮುಂಬೈ: ಈಕ್ವಿಟಿ ಮಾರುಕಟ್ಟೆ ಸೆನ್ಸೆಕ್ಸ್ ಬುಧವಾರದ ಆರಂಭಿಕ ವಹಿವಾಟಿನಲ್ಲಿ ಮೊದಲ ಬಾರಿಗೆ 44,000 ಗಡಿ ದಾಟಿದೆ, ಏಷ್ಯಾದ ಇತರ ಮಾರುಕಟ್ಟೆಗಳ ಸಕಾರಾತ್ಮಕ ವಹಿವಾಟು ಮತ್ತು ನಿರಂತರ ವಿದೇಶಿ ಸಂಪತ್ತಿನ ಒಳಹರಿವಿನ ನಡುವೆ ಬ್ಯಾಂಕಿಂಗ್ ಷೇರುಗಳು ಲಾಭ ಹೆಚ್ಚಿಸಿಕೊಂಡಿದೆ.
ಇಂದು ತನ್ನ ಆರಂಭಿಕ ವಹಿವಾಟಿನಲ್ಲಿ ಸಾರ್ವಕಾಲಿಕ 44,000 ಗಡಿ ದಾಟಿದ ನಂತರ , ಮುಂಬೈ ಷೇರು ವಿನಿಮಯ ಕೇಂದ್ರದ ದಿನದ ಸೂಚ್ಯಂಕವು ಆರಂಭಿಕ 55.15 ಪಾಯಿಂಟ್‌ಗಳ ಅಥವಾ ಶೇ 0.13 ರಷ್ಟು ಹೆಚ್ಚಳವಾಗಿ 44,007.86 ರಷ್ಟು ವಹಿವಾಟು ನಡೆಸುತ್ತಿದ್ದವು. ಅದೇ ರೀತಿ NSE ( ರಾಷ್ಟ್ರೀಯ ಷೇರುಪೇಟೆ) ನಿಫ್ಟಿ 19.10 ಪಾಯಿಂಟ್‌ಗಳು ಅಥವಾ ಶೇ 0.15 ರಷ್ಟು ಮುನ್ನಡೆ ಸಾಧಿಸಿ 12,893.30 ಕ್ಕೆ ತಲುಪಿದೆ.
ಪ್ರಮುಖ 30 ಕಂಪನಿಗಳ ಷೇರುಗಳ ಪೈಕಿ 21 ಕಂಪನಿ ಷೇರುಗಳು ಏರಿಕೆ ಕಂಡರೆ, 9 ಕಂಪನಿಗಳ ಷೇರುಗಳು ಕುಸಿದಿವೆ. ಪವರ್‌ಗ್ರಿಡ್ ಶೇ.1 ರಷ್ಟು ಏರಿಕೆ ಕಂಡಿದ್ದು, ಎಸ್‌ಬಿಐ, ಎಂ ಆ್ಯಂಡ್ ಎಂ, ಎಲ್ ಆಂಡ್ ಟಿ, ಇಂಡಸ್‌ಇಂಡ್ ಬ್ಯಾಂಕ್, ಐಸಿಐಸಿಐ ಬ್ಯಾಂಕ್, ಬಜಾಜ್ ಫೈನಾನ್ಸ್ ಮತ್ತು ಒಎನ್‌ಜಿಸಿ ನಂತರದ ಸ್ಥಾನಗಳಲ್ಲಿದ್ದು, ಷೇರುಗಳ ಬೆಲೆ ಹೆಚ್ಚಿಸಿಕೊಂಡಿವೆ. ಮತ್ತೊಂದೆಡೆ, ಎಚ್‌ಯುಎಲ್, ಟೈಟಾನ್, ಟೆಕ್ ಮಹೀಂದ್ರಾ, ನೆಸ್ಲೆ ಇಂಡಿಯಾ ಮತ್ತು ಟಿಸಿಎಸ್ ಕಂಪನಿಗಳ ಷೇರುಗಳು ಕುಸಿತ ಕಂಡಿವೆ.
ಹಿಂದಿನ ವಹಿವಾಟಿನಲ್ಲಿ ಬಿಎಸ್ಇ ಸೆನ್ಸೆಕ್ಸ್ ತನ್ನ ದಿನದ ಮುಕ್ತಾಯದ ವೇಳೆ 43,952.71 ರಲ್ಲಿ 314.73 ಪಾಯಿಂಟ್ ಅಥವಾ 0.72 ರಷ್ಟು ಹೆಚ್ಚಾಗಿತ್ತು. ನಿಫ್ಟಿ ಕೂಡ ತನ್ನ ಸಾರ್ವಕಾಲಿಕ ಗರಿಷ್ಠ 12,874.20 ಕ್ಕೆ 93.95 ಪಾಯಿಂಟ್ ಅಥವಾ 0.74 ರಷ್ಟು ಏರಿಕೆ ಕಂಡಿದೆ. ತಾತ್ಕಾಲಿಕ ವಿನಿಮಯ ದತ್ತಾಂಶಗಳ ಪ್ರಕಾರ, ವಿದೇಶಿ ಸಾಂಸ್ಥಿಕ ಹೂಡಿಕೆದಾರರು ಮಂಗಳವಾರ 4,905.35 ಕೋಟಿ ರೂ.ಗಳ ಷೇರುಗಳನ್ನು ಖರೀದಿಸಿದ್ದರಿಂದ ಬಂಡವಾಳ ಮಾರುಕಟ್ಟೆಯಲ್ಲಿ ನಿವ್ವಳ ಖರೀದಿದಾರರಾಗಿ ಉಳಿದಿದ್ದಾರೆ.
ಇನ್ನು ಮಿಕ್ಸ್ಡ್ ಜಾಗತಿಕ ಟ್ರೆಂಡ್ಸ್ಗಳ ಮಧ್ಯೆ ದೇಶೀಯ ಮಾರುಕಟ್ಟೆಗಳು ಸಮತಟ್ಟಾಗಿವೆ. ಆದಾಗ್ಯೂ, ನಿಫ್ಟಿ 13,000 ಅಂಕಗಳನ್ನು ಮುಟ್ಟಲು ಮುಂದಾಗಿದೆ ಎಂದು ರಿಲಯನ್ಸ್ ಸೆಕ್ಯುರಿಟೀಸ್‌ನ ಇನ್ಸ್ಟಿಟ್ಯೂಷನಲ್ ಬ್ಯುಸಿನೆಸ್ ಮುಖ್ಯಸ್ಥ ಅರ್ಜುನ್ ಯಶ್ ಮಹಾಜನ್ ಹೇಳಿದ್ದಾರೆ.
ಏಷ್ಯಾದ ಇತರಡೆಗಳಲ್ಲಿ ಅಂದರೆ ಶಾಂಘೈ, ಹಾಂಕಾಂಗ್ ಮತ್ತು ಸಿಯೋಲ್‌ನಲ್ಲಿ ಸಕಾರಾತ್ಮಕ ವಹಿವಾಟು ನಡೆಯುತ್ತಿದ್ದರೆ, ಟೋಕಿಯೊ ಷೇರುಪೇಟೆ ಹಿನ್ನೆಡೆ ಅನುಭವಿಸಿದೆ.