ಮುಂಬೈ: ಕಳೆದ ಎರಡು ದಿನಗಳಿಂದ ತಲ್ಲಣ ಸೃಷ್ಟಿಸಿದ್ದ ಷೇರುಪೇಟೆಯಲ್ಲಿ ಇಂದು ತುಸು ಚೇತರಿಕೆ ಕಂಡು ಬಂದಿದೆ. ನಿನ್ನೆ 600 ಅಂಕ ಹಾಗೂ ಸೋಮವಾರ 280 ಅಂಕಗಳಷ್ಟು ಕುಸಿತ ಕಂಡಿದ್ದ ಷೇರುಪೇಟೆ ಇಂದು ಆರಂಭಿಕ 144 ಅಂಕಗಳ ಏರಿಕೆ ಕಾಣುವ ಮೂಲಕ ಹೂಡಿಕೆದಾರರಲ್ಲಿ ತುಸು ಚೇತರಿಕೆ ಕಾಣುವಂತೆ ಮಾಡಿದೆ.
ನಿನ್ನೆ ಹಣಕಾಸು, ಬ್ಯಾಂಕಿಂಗ್, ಐಟಿ, ಫಾರ್ಮಾ ಸೇರಿದಂತೆ ಎಲ್ಲ ಷೇರುಗಳ ಬೆಲೆಯಲ್ಲಿ ಭಾರಿ ಇಳಿಕೆ ಕಂಡು ಬಂದಿತ್ತು. ಸೌದಿಯಲ್ಲಿ ತೈಲ ಸಂಸ್ಕರಣಾ ಘಟಕಗಳ ಮೇಲೆ ನಡೆದ ದಾಳಿ ಬಳಿಕ ಉಂಟಾದ ಉದ್ವಿಗ್ನ ಪರಿಸ್ಥಿತಿ ಷೇರುಪೇಟೆ ಮೇಲೆ ಭಾರಿ ಪರಿಣಾಮ ಬೀರಿತ್ತು.
ಇನ್ನು ಜಾಗತಿಕ ಆರ್ಥಿಕ ಹಿಂಜರಿತ, ಭಾರತದಲ್ಲಿ ಜಿಡಿಪಿ ಕುಸಿತ ಇವೆಲ್ಲ ಕಾರಣಗಳಿಂದ 40 ಸಾವಿರ ಗಡಿ ದಾಟಿ ಮುಂದುವರೆದಿದ್ದ ಷೇರುಪೇಟೆ ಆ ಬಳಿಕ 4 ಸಾವಿರ ಅಂಕಗಳ ಕುಸಿತ ಕಂಡಿದೆ. ಇದು ಹೂಡಿಕೆದಾರರ ಆತಂಕಕ್ಕೆ ಕಾರಣವಾಗಿದೆ.
ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ದೇಶದ ಆರ್ಥಿಕ ಪರಿಸ್ಥಿತಿಯನ್ನು ಸುಧಾರಿಸಲು ಹಲವು ಸುಧಾರಣಾ ಕ್ರಮಗಳನ್ನು ಕೈಗೊಂಡಿದ್ದಾಗ್ಯೂ ಷೇರುಪೇಟೆ ಚೇತರಿಕೆ ಕಾಣುತ್ತಿಲ್ಲ.