ನವದೆಹಲಿ: ಆರ್ಥಿಕ ದ್ರವ್ಯತೆ ಸ್ಥಿತಿ ವೃದ್ಧಿಸಲು ಮತ್ತು ಸಾಲಗಳ ಮೇಲಿನ ಬಡ್ಡಿ ವೆಚ್ಚ ತಗ್ಗಿಸಲು ಮಾರಾಟ ಆಗದೆ ಉಳಿದ ನೋ ಪ್ರಾಫಿಟ್ ನೋ ಲಾಸ್ನಂತಹ ಹೌಸಿಂಗ್ ಘಟಕಗಳನ್ನು ಮಾರಾಟ ಮಾಡುವಂತೆ ರಿಯಲ್ ಎಸ್ಟೇಟ್ ಉದ್ಯಮಿಗಳಿಗೆ ಕೇಂದ್ರ ಸಚಿವ ನಿತಿನ್ ಗಡ್ಕರಿ ಸಲಹೆ ನೀಡಿದ್ದಾರೆ.
ರೀಡರ್ಸ್ ಸಂಸ್ಥೆ ನರೇಡ್ಕೋ ಆಯೋಜಿಸಿದ್ದ ವೆಬ್ನಾರ್ ಉದ್ದೇಶಿಸಿ ಮಾತನಾಡಿದ ಹೆದ್ದಾರಿ ಸಚಿವ, ಕೊರೊನಾ ವೈರಸ್ ಹಾಗೂ ಲಾಕ್ಡೌನ್ನಿಂದಾಗಿ ಈಗಾಗಲೇ ಬೇಡಿಕೆ ಮಂದಗತಿಯಿಂದ ತೀರಾ ಕೆಳಮಟ್ಟಕ್ಕೆ ಇಳಿದಿದೆ. ಅದು ರಿಯಲ್ ಎಸ್ಟೇಟ್ ಕ್ಷೇತ್ರದ ಮೇಲೆ ಪ್ರಭಾವ ಬೀರಿದೆ ಎಂದರು.
ಉದ್ಯಮದ ಬೆಳವಣಿಗೆಗ ಸಂಪೂರ್ಣ ಬೆಂಬಲ ನೀಡುವ ಭರವಸೆ ನೀಡಿದ ಗಡ್ಕರಿ, ಬಿಲ್ಡರ್ಗಳು ತಮ್ಮ ಪ್ರತಿನಿಧಿಗಳನ್ನು ವಸತಿ ಮತ್ತು ಹಣಕಾಸು ಸಚಿವಾಲಯ ಹಾಗೂ ಪ್ರಧಾನ ಮಂತ್ರಿಗಳ ಕಚೇರಿಗೆ (ಪಿಎಂಒ) ಕಳುಹಿಸಬೇಕು. ಈಗಿನ ಬಿಕ್ಕಟ್ಟನ್ನು ಎದುರಿಸುವ ಮಾರ್ಗಗಳನ್ನು ಸೂಚಿಸಲು ಸಲಹೆ ನೀಡಬೇಕು ಎಂದು ಕೋರಿದರು.
ಗ್ರಾಮೀಣ ಪ್ರದೇಶಗಳಲ್ಲಿನ ವ್ಯಾಪಾರ ವಿಸ್ತರಣೆಯಿಂದ ಹಿಡಿದು ತಮ್ಮದೇ ಆದ ಹೌಸಿಂಗ್ ಫೈನಾನ್ಸ್ ಕಂಪನಿಗಳನ್ನು ಸ್ಥಾಪಿಸಿ. ರಸ್ತೆ ನಿರ್ಮಾಣ, ಅಗಲೀಕರಣದಂತಹ ಇತರೆ ನಿರ್ಮಾಣ ಕ್ಷೇತ್ರಗಳತ್ತ ಮುಖ ಮಾಡುವಂತೆ ಕಿವಿಮಾತು ಹೇಳಿದರು.
ಅನೇಕ ತಯಾರಕರು ತಮ್ಮದೇ ಆದ ಹಣಕಾಸು ಕಂಪನಿಗಳನ್ನು ಹೊಂದಿರುವ ಆಟೋಮೊಬೈಲ್ ಉದ್ಯಮದ ಉದಾಹರಣೆ ನೀಡಿದ ಗಡ್ಕರಿ, ರಿಯಲ್ ಎಸ್ಟೇಟ್ ಕಂಪನಿಗಳು ಕಡಿಮೆ ದರಗಳಲ್ಲಿ ಗ್ರಾಹಕರಿಗೆ ಸಾಲ ನೀಡಲು ತಮ್ಮದೇ ಆದ ಹೌಸಿಂಗ್ ಫೈನಾನ್ಸ್ ಕಂಪನಿಗಳನ್ನು ಸ್ಥಾಪಿಸುವುದರತ್ತ ಗಮನಹರಿಸಬಹುದು. ಸದಾ ಬ್ಯಾಂಕ್ಗಳ ಮೇಲೆ ಅವಲಂಬಿತವಾಗುವುದು ತಪ್ಪುತ್ತದೆ ಎಂದು ವಹಿವಾಟು ವಿಸ್ತರಣೆಯ ಅವಕಾಶ ಸೂಚಿಸಿದರು.
ಸರ್ಕಾರ ಮತ್ತು ಖಾಸಗಿ ಉದ್ಯಮಿಗಳಿಂದ ಈಕ್ವಿಟಿ ಒಳಪಡಿಯುವ ಮೂಲಕ ಬ್ಯಾಂಕೇತರ ಹಣಕಾಸು ಕಂಪನಿಗಳನ್ನು (ಎನ್ ಬಿಎಫ್ ಸಿಗಳು) ಬಲಪಡಿಸುವ ಅಗತ್ಯವಿದೆ. ಎನ್ಬಿಎಫ್ಸಿ ಬಡ್ಡಿ ದರ ಕಡಿಮೆ ಇರುವ ಅಂತಾರಾಷ್ಟ್ರೀಯ ಮಾರುಕಟ್ಟೆಗಳಿಂದ ಹಣ ಆಕರ್ಷಿಸಬೇಕು ಎಂದರು.