ಬೆಂಗಳೂರು: ಡಿಜಿಟಲ್ ಪಾವತಿ ವಹಿವಾಟು ಹೆಚ್ಚಿಸಲು ಮತ್ತೊಂದು ಹೆಜ್ಜೆ ಇಟ್ಟಿರುವ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (ಆರ್‌ಬಿಐ) ಈ ವರ್ಷದ ಡಿಸೆಂಬರ್‌ನಿಂದ ರಿಯಲ್ ಟೈಮ್ ಗ್ರಾಸ್ ಸೆಟಲ್ಮೆಂಟ್ (ಆರ್‌ಟಿಜಿಎಸ್) ಪಾವತಿ ವ್ಯವಸ್ಥೆಯು ವಾರದ ಎಲ್ಲ ದಿನವೂ ಕಾರ್ಯಗತವಾಗಲಿದೆ.
ಅಕ್ಟೋಬರ್ ಮಾಸಿಕದ ವಿತ್ತೀಯ ನೀತಿ ಪರಿಶೀಲನಾ ಸಭೆಯ ಬಳಿಕ ಫಲಿತಾಂಶ ಘೋಷಿಸಿದ ಆರ್‌ಬಿಐ ಗವರ್ನರ್ ಶಕ್ತಿಕಾಂತ ದಾಸ್, ಜಾಗತಿಕವಾಗಿ 24x7x365 ವೇಳೆ ನೈಜ ಸಮಯ ಪಾವತಿ ವ್ಯವಸ್ಥೆ (ಆರ್‌ಟಿಜಿಎಸ್) ಹೊಂದಿರುವ ಭಾರತವು ಜಾಗತಿಕವಾಗಿ ಕೆಲವೇ ದೇಶಗಳಲ್ಲಿ ಮುಂಚೂಣಿಯಲ್ಲಿ ಇರಲಿದೆ. ಇದು ದೊಡ್ಡ ಮೌಲ್ಯ ಪಾವತಿ ಪರಿಸರ ವ್ಯವಸ್ಥೆ ಮತ್ತು ಸುಲಲಿತ ವ್ಯವಹಾರಗಳ ಹೊಸತನಗಳಿಗೆ ಅನುಕೂಲ ಮಾಡಿಕೊಡಲಿದೆ ಎಂದರು.
ಪ್ರಸ್ತುತ, ಗ್ರಾಹಕರ ಆರ್‌ಟಿಜಿಎಸ್ ಸೇವೆಯನ್ನು ಬ್ಯಾಂಕ್ಗಳ ಕೆಲಸದ ದಿನದಂದು ಬೆಳಗ್ಗೆ 7 ರಿಂದ ಸಂಜೆ 6 ರವರೆಗೆ ಮಾತ್ರ ಮಾಡಬಹುದಾಗಿದೆ. ಬ್ಯಾಂಕ್ಗಳು ಅನುಸರಿಸುವ ಸಮಯಗಳ ಅನುಗುಣವಾಗಿ ಬ್ಯಾಂಕ್ನಿಂದ ಬ್ಯಾಂಕ್‌ಗೆ ಬದಲಾಗಬಹುದು. 2019ರ ಡಿಸೆಂಬರ್‌ನಲ್ಲಿ ಆರ್‌ಬಿಐ ರಾಷ್ಟ್ರೀಯ ಎಲೆಕ್ಟ್ರಾನಿಕ್ ನಿಧಿ ವರ್ಗಾವಣೆ (ಎನ್‌ಇಎಫ್‌ಟಿ) ವ್ಯವಸ್ಥೆಯನ್ನು 24x7x365 ಆಧಾರದ ಮೇಲೆ ಲಭ್ಯವಾಗುವಂತೆ ಜಾರಿಗೊಳಿಸಿತು.
ಆರ್‌ಟಿಜಿಎಸ್ ಮತ್ತು ಎನ್‌ಇಎಫ್‌ಟಿ ಪರಸ್ಪರ ಭಿನ್ನವಾಗಿವೆ. 2 ಲಕ್ಷ ರೂ.ವರೆಗಿನ ಹಣ ವರ್ಗಾವಣೆಗೆ ಎನ್‌ಇಎಫ್‌ಟಿ, 2 ಲಕ್ಷ ರೂ.ಗಿಂತ ಹೆಚ್ಚಿನ ವರ್ಗಾವಣೆಗೆ ಆರ್‌ಟಿಜಿಎಸ್ ಬಳಸುತ್ತಿದ್ದಾರೆ.