ನವದೆಹಲಿ: ರಾಷ್ಟ್ರವ್ಯಾಪಿ ಲಾಕ್ಡೌನ್ನಿಂದ ಕಳೆದ 60 ದಿನಗಳಲ್ಲಿ ಭಾರತದ ಚಿಲ್ಲರೆ ವ್ಯಾಪಾರವು ಸುಮಾರು 9 ಲಕ್ಷ ಕೋಟಿ ರೂ.ಯಷ್ಟು ವ್ಯವಹಾರ ಕಳೆದುಕೊಂಡಿದೆ ಎಂದು ಕಾನ್ಫೆಡರೇಷನ್ ಆಫ್ ಆಲ್ ಇಂಡಿಯಾ ಟ್ರೇಡರ್ಸ್ (ಸಿಎಐಟಿ) ತಿಳಿಸಿದೆ.
ಕಳೆದ ಸೋಮವಾರದಿಂದ ನಿರ್ಬಂಧಗಳನ್ನು ಸಡಿಲಿಸಿದಾಗಿನಿಂದ ಕೇವಲ 5 ಪ್ರತಿಶತದಷ್ಟು ವ್ಯವಹಾರಗಳು ಮಾತ್ರ ನಡೆದಿರಬಹುದು. ಶೇ 8ರಷ್ಟು ಉದ್ಯೋಗಿಗಳಿಂದ ವ್ಯಾಪಾರ ಪುನರಾರಂಭಿಸಲು ಸಾಧ್ಯವಾಯಿತು ಎಂದು ವ್ಯಾಪಾರಿಗಳ ಸಂಸ್ಥೆ ಪ್ರಕಟಣೆಯಲ್ಲಿ ತಿಳಿಸಿದೆ.
ವ್ಯವಹಾರದ ನಷ್ಟ ಮತ್ತು ಜಿಎಸ್‌ಟಿ ಕಾರಣದಿಂದಾಗಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಗೆ ಸುಮಾರು 1.5 ಲಕ್ಷ ಕೋಟಿ ರೂ.ಗಳ ಆದಾಯ ನಷ್ಟವಾಗಿದೆ ಎಂದು ಹೇಳಿದೆ.
ದೇಶಾದ್ಯಂತದ ವ್ಯಾಪಾರಿಗಳು ತೀವ್ರ ಆರ್ಥಿಕ ಬಿಕ್ಕಟ್ಟನ್ನು ಎದುರಿಸುತ್ತಿದ್ದಾರೆ. ಸರ್ಕಾರದಿಂದ ಯಾವುದೇ ನೀತಿ ಬೆಂಬಲವಿಲ್ಲದಿದ್ದಲ್ಲಿ ತಮ್ಮ ವ್ಯವಹಾರದ ಭವಿಷ್ಯದ ಬಗ್ಗೆ ಹೆಚ್ಚು ಚಿಂತಿತರಾಗಿದ್ದಾರೆ ಎಂದು ಕಳವಳ ವ್ಯಕ್ತಪಡಿಸಿದೆ.
ದೆಹಲಿಯ ಸಗಟು ಮಾರುಕಟ್ಟೆಗಳಿಂದ ಸರಕುಗಳನ್ನು ಖರೀದಿಸಲು ಸುಮಾರು 5 ಲಕ್ಷ ಹೊರಗಿನ ವ್ಯಾಪಾರಿಗಳು ದೆಹಲಿಗೆ ಬರುತ್ತಿದ್ದರು. ಆದರೆ, ಸಾರಿಗೆ ಲಭ್ಯವಿಲ್ಲದ ಕಾರಣ ದೆಹಲಿ ಸಗಟು ಮಾರುಕಟ್ಟೆಗಳು ಕಳೆದ ಒಂದು ವಾರದಲ್ಲಿ ನಿರ್ಜನವಾಗಿದ್ದವು ಎಂದು ತಿಳಿಸಿದೆ.
ಕಾರ್ಮಿಕರ, ಸಾರಿಗೆಯ ಲಭ್ಯತೆಯ ಕೊರತೆ ಮತ್ತು ಗ್ರಾಹಕರ ನಗಣ್ಯವು ವ್ಯಾಪಾರಿಗಳ ತೀವ್ರ ಆರ್ಥಿಕ ಬಿಕ್ಕಟ್ಟಿಗೆ ಕಾರಣವಾಗಿದೆ. ಸುಮಾರು ಏಳು ಕೋಟಿ ವ್ಯಾಪಾರಿಗಳು 40 ಕೋಟಿ ಜನರಿಗೆ ಉದ್ಯೋಗವನ್ನು ಒದಗಿಸುತ್ತಿದ್ದು, ವಾರ್ಷಿಕ ವಹಿವಾಟು ಸುಮಾರು 50 ಲಕ್ಷ ಕೋಟಿ ರೂ.ಯಷ್ಟಿದೆ.
ವ್ಯಾಪಾರಿಗಳನ್ನು ಕೈಹಿಡಿಯಬೇಕಾದ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಸಂಪೂರ್ಣವಾಗಿ ನಿರ್ಲಕ್ಷಿಸಿರುವುದರಿಂದ ಈ ಬಿಕ್ಕಟ್ಟು ಮತ್ತಷ್ಟು ಗಾಢವಾಗಿದೆ ಎಂದು ಹೇಳಿದೆ.