ನವದೆಹಲಿ: ಅತೀ ದೊಡ್ಡ ಆನ್ಲೈನ್ ಫಾರ್ಮಾ ಕಂಪನಿ ನೆಟ್ ಮೆಡ್ಸ್ನ (ವಿಟಾಲಿಕ್) ಬಹುಪಾಲು ಷೇರುಗಳನ್ನು ರಿಯಲನ್ಸ್ ರಿಟೇಲ್ ವೆಂಚರ್ಸ್ ಲಿಮಿಟೆಡ್ (ಆರ್ಆರ್ವಿಎಲ್) ತನ್ನದಾಗಿಸಿಕೊಂಡಿದೆ. ಸುಮಾರು 620 ಕೋಟಿ ರೂಪಾಯಿಗೆ ನೆಟ್ ಮೆಡ್ಸ್ನ ಶೇ. 60 ಷೇರುಗಳನ್ನು ರಿಲಯನ್ಸ್ ಪಡೆದುಕೊಂಡಿದೆ. ಈ ಮೂಲಕ ಇತ್ತೀಚೆಗೆ ಆನ್ಲೈನ್ ಫಾರ್ಮಾ ಕ್ಷೇತ್ರಕ್ಕೆ ಕಾಲಿಟ್ಟ ಅಮೆಜಾನ್ಗೆ ಪೈಪೋಟಿ ನೀಡಲು ಮುಂದಾಗಿದೆ.
ವಿಟಾಲಿಕ್ ಸಂಸ್ಥೆಯ ಶೇ.60 ಷೇರುಗಳು ಮತ್ತು ಅದರ ಸಹ ಸಂಸ್ಥೆಗಳಾದ ಟ್ರೆಸರಾ ಹೆಲ್ತ್ ಪ್ರೈವೇಟ್ ಲಿಮಿಟೆಡ್, ನೆಟ್‌ಮೆಡ್ಸ್ ಮಾರ್ಕೆಟ್ ಪ್ಲೇಸ್ ಲಿಮಿಟೆಡ್ ಮತ್ತು ದಾದಾ ಫಾರ್ಮಾ ಡಿಸ್ಟ್ರಿಬ್ಯೂಷನ್ ಪ್ರೈವೇಟ್ ಲಿಮಿಟೆಡ್‌ನ ಶೇ.100 ರಷ್ಟು ಷೇರುಗಳನ್ನು ರಿಲಯನ್ಸ್ ಪಡೆದುಕೊಂಡಿದೆ. ವಿಟಾಲಿಕ್ ಹೆಲ್ತ್ ಲಿಮಿಟೆಡ್ ಮತ್ತು ಅದರ ಸಹ ಸಂಸ್ಥೆಗಳನ್ನು ಸಾಮಾನ್ಯವಾಗಿ ನೆಟ್‌ಮೆಡ್ಸ್ ಎಂದು ಕರೆಯುತ್ತಾರೆ.
ನೆಟ್ಮೆಡ್ಸ್ನ ಹೂಡಿಕೆ ಪ್ರತಿಯೊಬ್ಬ ಭಾರತೀಯನಿಗೂ ಡಿಜಿಟಲ್ ಕ್ಷೇತ್ರಕ್ಕೆ ಪ್ರವೇಶಿಸಲು ಅವಕಾಶ ಒದಗಿಸುವ ನಮ್ಮ ಬದ್ಧತೆಯ ಭಾಗವಾಗಿದೆ. ಇದು ಉತ್ತಮ ಗುಣಮಟ್ಟದ ಮತ್ತು ಕೈಗೆಟಕುವ ದರದಲ್ಲಿ ಆರೋಗ್ಯ ಉತ್ಪನ್ನಗಳನ್ನು ಮತ್ತು ಸೇವೆಯನ್ನು ಜನರಿಗೆ ಒದಗಿಸುವ ರಿಲಯನ್ಸ್ ರಿಟೇಲ್ನ ಸಾಮರ್ಥ್ಯವನ್ನು ಹೆಚ್ಚಿಸುತ್ತದೆ ಎಂದು ರಿಲಯನ್ಸ್ ರಿಟೇಲ್ ವೆಂಚರ್ಸ್ ಲಿಮಿಟೆಡ್ ( ಆರ್ಆರ್ವಿಲ್) ತಿಳಿಸಿದೆ.
2015 ರಲ್ಲಿ ಸ್ಥಾಪನೆಯಾದ ವಿಟಾಲಿಕ್ ಮತ್ತು ಅದರ ಅಗ ಸಂಸ್ಥೆಗಳು ಆನ್ಲೈನ್ ಔಷಧಿಗಳ ಮಾರಾಟ ಮತ್ತು ವೈದ್ಯಕೀಯ ಸೇವೆಯಲ್ಲಿ ಗುರುತಿಸಿಕೊಂಡಿದೆ. ಔಷಧಿ ವಿತರಕರು ಗ್ರಾಹಕರನ್ನು ಸಂಪರ್ಕಿಸಲು ಮತ್ತು ಔಷಧಿಗಳು, ಆರೋಗ್ಯ ಉತ್ಪನ್ನಗಳನ್ನು ಜನರ ಮನೆ ಬಾಗಿಲಿಗೆ ತಲುಪಿಸಲು ಇದು ಸಹಕಾರಿಯಾಗಿದೆ. ಇದರ ಅಂಗ ಸಂಸ್ಥೆಗಳು ಕೂಡ ಆನ್ಲೈನ್ ಮೂಲಕ ವೈದ್ಯರ ಅಪಾಯಿಂಟ್ಮೆಂಟ್ ಕಾಯ್ದಿರಿಸಿಕೊಳ್ಳಲು ಅವಕಾಶವನ್ನು ಕಲ್ಪಿಸಿಕೊಡುತ್ತಿದೆ. ದೊಡ್ಡ ಮಟ್ಟದಲ್ಲಿ ಹಣ ಹೂಡಿಕೆ ಮಾಡಲು ಸಾಧ್ಯವಾಗದ ಹಿನ್ನೆಲೆ ಕಳೆದ ತಿಂಗಳು ನೆಡ್ಮೆಡ್ಸ್ ತನ್ನ ಷೇರುಗಳನ್ನು ಮಾರಾಟ ಮಾಡಲು ಮುಂದಾಗಿತ್ತು.