ನವದೆಹಲಿ: ಅಮೆರಿಕಾದ ನಿರ್ಬಂಧ, ಒತ್ತಡಗಳ ನಡುವೆ ಭಾರತ, ರಷ್ಯಾದೊಂದಿಗೆ ರಕ್ಷಣಾತ್ಮಕ ಒಪ್ಪಂದ ಮಾಡಿಕೊಂಡು ದಿಟ್ಟತನ ತೋರಿದ ಬಳಿಕ ವಾಷಿಂಗ್ಟನ್ ಭಾರತವನ್ನು ಧರ್ಮಸಂಕಟಕ್ಕೆ ಸಿಲುಕಿಸಿದೆ.
ಭಾರತ-ರಷ್ಯಾ ಕಳೆದ ವರ್ಷ ಐತಿಹಾಸಿಕ ಎಸ್-400 ಟ್ರಯಂಫ್ ಕ್ಷಿಪಣಿ ವ್ಯವಸ್ಥೆ ಖರೀದಿಸುವ ಒಪ್ಪಂದಕ್ಕೆ ಸಹಿ ಹಾಕಿದ್ದವು. S ಟ್ರಯಂಫ್ ಏಕಕಾಲದಲ್ಲಿ 72 ಕ್ಷಿಪಣಿಗಳನ್ನು ಸಿಡಿಸಬಹುದಾಗಿದ್ದು, ಒಂದೇ ಬಾರಿಗೆ 36 ಟಾರ್ಗೆಟ್ಗಳತ್ತ ನುಗ್ಗುತ್ತದೆ. ₹ 40 ಸಾವಿರ ಕೋಟಿ ಮೊತ್ತದ ಈ ಒಪ್ಪಂದ ಭಾರತದ ರಕ್ಷಣಾ ವ್ಯವಸ್ಥೆಗೆ ಹೊಸ ಬಲ ಬಂದಂತೆ ಆಗಲಿದೆ.
ಶತ್ರುಗಳ ಚಕ್ರವ್ಯೂಹ ಬೇಧಿಸುವ ಎಸ್-400 ಟ್ರಯಂಫ್ ಕ್ಷಿಪಣಿ:
ಆಲ್ಮಾಜ್ ಆಂಟೆ ರಷ್ಯಾನ್ ಸರ್ಕಾರಿ ಸಂಸ್ಥೆ ಅಭಿವೃದ್ಧಿ ಪಡಿಸಿರುವ ಎಸ್-400 ಟ್ರಯಂಫ್ ಎಂಬುದು ದೂರ ಶ್ರೇಣಿಯ ಏರ್ ಡಿಫೆನ್ಸ್ ಮಿಸೈಲ್ ಸಿಸ್ಟಂ. ಇದು ಏಕಕಾಲದಲ್ಲಿ 36 ಟಾರ್ಗೆರ್ಟ್ಗಳ ಮೇಲೆ ದೃಷ್ಟಿಯಲ್ಲಿಟ್ಟುಕೊಂಡು ಮೂರು ರೀತಿಯಲ್ಲಿ ಕ್ಷಿಪಣಿಗಳನ್ನು ಹಾರಿಸಬಲ್ಲುದು.
ಶತ್ರುಗಳಿಂದ ನಡೆಯಬಹುದಾದ ಪ್ರತಿದಾಳಿಯನ್ನು ಕೂಡ ಸಮರ್ಪಕವಾಗಿ ತಡೆಯಬಲ್ಲದು. 400 ಕಿ.ಮೀ. ದೂರದಲ್ಲಿರುವ ಶತ್ರುಗಳ ಯುದ್ಧವಿಮಾನ, ಕ್ಷಿಪಣಿ ಮತ್ತು ಡ್ರೋನ್ಗಳನ್ನು ಕ್ಷಣಾರ್ಧದಲ್ಲಿ ಹೊಡೆದುರುಳಿಸಬಹುದು. ಸೆಕೆಂಡ್ಗೆ 4.8 ಕಿ.ಮೀ. ವೇಗದಲ್ಲಿ ಹಾರಬಲ್ಲ ಟ್ರಯಂಫ್, ಗಂಟೆಗೆ 17 ಸಾವಿರ ಕಿ.ಮೀ. ವೇಗದಲ್ಲಿ ಟಾರ್ಗೆಟ್ ಬಳಿ ನುಗ್ಗುವ ಅತ್ಯಾಧುನಿಕ ಕ್ಷಿಪಣಿ. 400 ಕಿಮೀ ದೂರದ ಟಾರ್ಗೆಟ್‌ನ್ನು ಮಿಂಚಿನ ವೇಗದಲ್ಲಿ ಸಾಗಿ ಹೊಡೆದುರುಳಿಸುವ ಸಾಮರ್ಥ್ಯ ಹೊಂದಿದೆ.
ವಿಧ್ವಂಸಕ ಎಫ್-35 ಫೈಟರ್ ಜೆಟ್:
ಎಫ್-35 ಅಮೆರಿಕದಲ್ಲಿರುವ ಅದ್ಭುತ ಯುದ್ಧಯಂತ್ರ. ವೈರಿಗಳ ದೃಷ್ಟಿಗೆ ಗೋಚರ ಆಗುವ ಮೊದಲೇ ಅವರ ನೆಲದಲ್ಲಿ ವಿಧ್ವಂಸಕ ದಾಳಿ ನಡೆಸಿ ಕ್ಷಣಾರ್ಧದಲ್ಲಿ ನಾಶಗೊಳಿಸಬಲ್ಲ 'ಹಾರುವ ಕಂಪ್ಯೂಟರ್' ಎಂದೇ ಹೆಸರುವಾಸಿ. ಈ ಫೈಟರ್ ಅನ್ನು ₹ 37 ಸಾವಿರ ಕೋಟಿ (5.43 ಬಿಲಿಯನ್ ಡಾಲರ್) ಮೊತ್ತದ ಷರತ್ತುಬದ್ಧ ರಕ್ಷಣಾ ಒಪ್ಪಂದಕ್ಕೆ ಅಮೆರಿಕ ಇಂಗಿತ ವ್ಯಕ್ತಪಡಿಸಿದೆ.
51.4 ಅಡಿ ಉದ್ದ, 14.2 ಅಡಿ ಎತ್ತರ, 13,300 ಕೆ.ಜಿ.ಯ ಫೈಟರ್ ಶಸ್ತ್ರಾಸ್ತ್ರ, ಇಂಧನ ತುಂಬಿದಾಗ 22, 470 ಕೆ.ಜಿ. ತೂಗುತ್ತದೆ. 8,382 ಕಿಲೋಗ್ರಾಂ ಇಂಧನ ಸಾಮರ್ಥ್ಯದ ಟ್ಯಾಂಕರ್ ಹೊಂದಿದೆ. ನಿಂತ ನೆಲದಿಂದಲೇ ಆಕಾಶಕ್ಕೆ ಏರಬಲ್ಲ ಹಾಗೂ ನೇರ ಭೂಸ್ಪರ್ಶದ ತಾಂತ್ರಿಕ ಸಾಮರ್ಥ್ಯವಿದೆ. 60 ಸಾವಿರ ಅಡಿ ಎತ್ತರದಲ್ಲಿ ಶಬ್ದಕ್ಕಿಂತ 1.6 ಪಟ್ಟು ವೇಗದಲ್ಲಿ (ಗಂಟೆಗೆ 1,960 ಕಿ.ಮೀ) ಹಾರಬಲ್ಲದು. ಇಂಧನ ಮರು ಪೂರ್ಣವಿಲ್ಲದೆ 1,080 ಕಿ.ಮೀ. ಕ್ರಮಿಸುತ್ತದೆ.
ಇಂತಹ ಅತ್ಯಾಧುನಿಕ ಫೈಟರ್ ವಿಮಾನ ಭಾರತಕ್ಕೆ ನೀಡುವುದಾಗಿ ಅಮೆರಿಕ ಹೇಳಿದೆ. ಈ ಯುದ್ಧವಿಮಾನ ಒಪ್ಪಂದ ಜಾರಿಗೆ ಬಂದರೆ ಭಾರತದ ಶತ್ರು ರಾಷ್ಟ್ರವಾಗಿರುವ ಪಾಕಿಸ್ತಾನ ಮತ್ತು ಚೀನಾಕ್ಕೆ ಪ್ರಬಲ ಪ್ರತ್ಯುತ್ತರ ನೀಡಬಹುದು. ಜಗತ್ತಿನ ಅತಿದೊಡ್ಡ ಆರ್ಥಿಕ ಹಾಗೂ ಪ್ರಬಲ ಸೇನಾಬಲ ಹೊಂದಿರುವ ರಾಷ್ಟ್ರಗಳು ಭಾರತಕ್ಕೆ ಸ್ನೇಹ ಮತ್ತು ವಾಣಿಜ್ಯಾತ್ಮಕವಾಗಿ ಹತ್ತಿರವಾಗಿವೆ. ರಷ್ಯಾ-ಅಮೆರಿಕಾ ನಡುವಿನ ಶೀತಲ ಸಮರದ ನಡುವೆ ಸಿಲುಕಿರುವ ಭಾರತ, ಪ್ರಧಾನಿ ಮೋದಿ ಸರ್ಕಾರ ಯಾವ ರೀತಿಯ ನಿರ್ಣಯ ತೆಗೆದುಕೊಳ್ಳುತ್ತಾರೆ ಎಂಬುದು ಕುತೂಹಲವಾಗಿ ಉಳಿದಿದೆ.