ನವದೆಹಲಿ: ಫ್ಲಿಪ್ಕಾರ್ಟ್ ಮಾಲೀಕತ್ವದ ಇ ಕಾಮರ್ಸ್ ಸಂಸ್ಥೆ ಫೋನ್ಪೇ ಈಗ ಒಟ್ಟು 250 ಮಿಲಿಯನ್ ನೋಂದಾಯಿತ ಬಳಕೆದಾರರನ್ನು ದಾಟಿ ದಾಖಲೆ ನಿರ್ಮಿಸಿದೆ ಎಂದು ಅಧಿಕೃತ ಹೇಳಿಕೆ ನೀಡಿದೆ.
ಸೆಪ್ಟೆಂಬರ್ನಲ್ಲಿ 750 ಮಿಲಿಯನ್ ವಹಿವಾಟುಗಳನ್ನು ನಡೆಸಲಾಗಿದ್ದು, ಅಕ್ಟೋಬರ್ನಲ್ಲಿ 100 ಮಿಲಿಯನ್ ಸಕ್ರಿಯ ಬಳಕೆದಾರರರೊಂದಿಗೆ 925 ಮಿಲಿಯನ್ ವಹಿವಾಟುಗಳನ್ನು ನಡೆಸಲಾಗಿದ್ದು, ಇದು ದಾಖಲೆ ಮಟ್ಟದ್ದಾಗಿದೆ ಎಂದು ಫೋನ್ಪೇ ಹೇಳಿದೆ.
ಕಂಪನಿಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸಮೀರ್ ನಿಗಮ್ ಈ ಬಗ್ಗೆ ಸ್ಪಷ್ಟನೆ ನೀಡಿದ್ದು, ಡಿಸೆಂಬರ್ 2022ರ ವೇಳೆಗೆ 500 ಮಿಲಿಯನ್ ಮಂದಿ ನೋಂದಾಯಿತ ಬಳಕೆದಾರರನ್ನು ಹೊಂದುವುದು ತಮ್ಮ ಗುರಿ ಎಂದು ಅಭಿಪ್ರಾಯ ಪಟ್ಟಿದ್ದಾರೆ.
ಇದರ ಜೊತೆಗೆ ''ಕರ್ತೆ ಜಾ, ಬಡ್ತೇ ಜಾ'' ಎಂಬ ಘೋಷಣೆಯಡಿಯಲ್ಲಿ ನಾವು ಹಲವಾರು ಹೊಸ ಮತ್ತು ಆವಿಷ್ಕಾರಕ ಉತ್ಪನ್ನಗಳನ್ನು ಬಿಡುಗಡೆ ಮಾಡುತ್ತೇವೆ. ಪ್ರತಿ ಹಳ್ಳಿ ಹಾಗೂ ಪಟ್ಟಣದಲ್ಲಿ ಪ್ರತಿಯೊಬ್ಬರಿಗೂ ಫೋನ್ಪೆ ತಲುಪುವ ಹಾಗೆ ನೋಡಿಕೊಳ್ಳುತ್ತೇವೆ ಎಂದು ಸಮೀರ್ ನಿಗಮ್ ಹೇಳಿದ್ದಾರೆ.
ಇನ್ನು ಫೋನ್ಪೆ ಆನ್ಲೈನ್ ಮೂಲಕ ಹಣ ವರ್ಗಾವಣೆ ಆ್ಯಪ್ ಆಧಾರಿತ ಸೇವೆಯಾಗಿದ್ದು, ಪೇಟಿಯಂ, ಮೊಬಿಕ್ವಿಕ್, ಗೂಗಲ್ ಪೇ ಮುಂತಾದ ಸ್ಪರ್ಧಿಗಳನ್ನು ಹೊಂದಿದೆ. ಹಣ ವರ್ಗಾವಣೆಯ ಜೊತೆಗೆ ಚಿನ್ನವನ್ನು ಕೊಳ್ಳುವ ಅವಕಾಶವನ್ನೂ ಫೋನ್ಪೆ ನೀಡುತ್ತಿದೆ.
ಈಗ ಸದ್ಯಕ್ಕೆ ದೇಶದ 500 ನಗರಗಳಲ್ಲಿರುವ ಫೋನ್ಪೆ ಸ್ವಿಚ್ ಎಂಬ ಫ್ಲಾಟ್ಫಾರ್ಮ್ ಅನ್ನು ಬಿಡುಗಡೆಗೊಳಿಸಿದ್ದು,ಈ ಮೂಲಕ ಹಲವು ಆಫರ್ಗಳನ್ನು ನೀಡುತ್ತಿದೆ.