ನವದೆಹಲಿ: ದೇಶದಲ್ಲಿ ಕಾಣುತ್ತಿರುವ ಆರ್ಥಿಕ ಚೇತರಿಕೆ ಅತಿ ಶೀಘ್ರದಲ್ಲೇ ಕೋವಿಡ್‌ಗೂ ಮುಂಚೆ ಇದ್ದಂತಹ ಸ್ಥಿತಿಗೆ ಕೊಂಡೊಯ್ಯುತ್ತದೆ ಎಂದು ಖ್ಯಾತ ಅರ್ಥಶಾಸ್ತ್ರಜ್ಞ ಜಯಂತ್ ಆರ್ ವರ್ಮಾ ಅಭಿಪ್ರಾಯ ಪಟ್ಟಿದ್ದಾರೆ. ಈ ಬಗ್ಗೆ ಮಾತನಾಡಿದ ಅವರು, ಭಾರತೀಯ ಹಣಕಾಸು ಕ್ಷೇತ್ರದಲ್ಲಿನ ಆರೋಗ್ಯಕರ ಬೆಳವಣಿಗೆಯೂ ಆರ್ಥಿಕ ಬೆಳವಣಿಗೆಗೆ ಧನಾತ್ಮಕ ಅಂಶವಾಗಿದೆ ಎಂದು ಹೇಳಿದ್ದಾರೆ.
ರಿಸರ್ವ್ ಬ್ಯಾಂಕಿನ ವಿತ್ತೀಯ ನೀತಿ ಸಮಿತಿಯ (ಎಂಪಿಸಿ) ಸದಸ್ಯರೂ ಆಗಿರುವ ವರ್ಮಾ, ಸುದ್ದಿ ಸಂಸ್ಥೆಗೆ ನೀಡಿದ ಸಂದರ್ಶನದಲ್ಲಿ, ಅಧಿಕ ಮತ್ತು ನಿರಂತರ ಹಣದುಬ್ಬರವು ವಿತ್ತೀಯ ನೀತಿಯ ಮೇಲೆ ಪ್ರಮುಖ ಅಡಚಣೆಯಾಗಿದೆ ಎಂದಿದ್ದಾರೆ.
ಈಗಿನ ಆರ್ಥಿಕ ಚೇತರಿಕೆಯ ಬಗ್ಗೆ ನಾನು ಸಾಕಷ್ಟು ಧನಾತ್ಮಕವಾಗಿದ್ದೇನೆ. ಕೆಲ ಸಾಲ ನೀಡಿಕೆಯ ಸೇವೆಗಳನ್ನು ಹೊರತುಪಡಿಸಿ ಆರ್ಥಿಕತೆಯ ಹೆಚ್ಚಿನ ಕ್ಷೇತ್ರಗಳಲ್ಲಿ ಕೋವಿಡ್‌ಗೂ ಮುಂಚಿನ ಮಟ್ಟಕ್ಕಿಂತ ಬೇಗನೆ ಕರೆದೊಯ್ಯುತ್ತದೆ. 2018 ರ ಸುಮಾರಿಗೆ ಆರಂಭವಾದ ನಿಧಾನಗತಿಯನ್ನು ಹಿಮ್ಮೆಟ್ಟಿಸುವುದು ಮತ್ತು ಸುಸ್ಥಿರ ಬೆಳವಣಿಗೆಯನ್ನು ಸಾಧಿಸುವುದು ಸವಾಲಾಗಿದೆ ಎಂದು ವರ್ಮಾ ಹೇಳಿದ್ದಾರೆ.
ಇದನ್ನೂ ಓದಿ: ಆರ್ಥಿಕ ವಲಯಕ್ಕಿಲ್ಲ COVID 2ನೇ ಅಲೆ ಎಫೆಕ್ಟ್; ಮೊದಲ ತ್ರೈಮಾಸಿಕದಲ್ಲಿ GDP ಶೇ.20.1 ಪ್ರಗತಿ
ನನ್ನ ದೃಷ್ಟಿಯಲ್ಲಿ ಸುಸ್ಥಿರ ಬೆಳವಣಿಗೆ ಮುಖ್ಯವಾಗಿ ವ್ಯಾಪಾರ ವಲಯದ ಬಂಡವಾಳ ಹೂಡಿಕೆಯ ಪುನರುಜ್ಜೀವನದ ಮೇಲೆ ಅವಲಂಬಿತವಾಗಿದೆ. ನಾನು ಅದರ ಬಗ್ಗೆಯೂ ಆಶಿಸುತ್ತೇನೆ. ಭಾರತೀಯ ಹಣಕಾಸು ಕ್ಷೇತ್ರದಲ್ಲಿನ ಸುಧಾರಿತ ಪ್ರಗತಿ ಆರ್ಥಿಕ ಬೆಳವಣಿಗೆಗೆ ಧನಾತ್ಮಕ ಅಂಶವಾಗಿದೆ.
ಈ ವರ್ಷದ ಆರ್ಥಿಕತೆಯು ಏಪ್ರಿಲ್-ಜೂನ್ ಮೊದಲ ತ್ರೈಮಾಸಿಕದಲ್ಲಿ ದಾಖಲೆಯ ಶೇ.20.1 ರಷ್ಟು ಬೆಳವಣಿಗೆಯಾಗಿದೆ. ಕಳೆದ ಇದೇ ಅವಧಿಯಲ್ಲಿ ದುರ್ಬಲವಾಗಿತ್ತು. ಉತ್ಪಾದನೆ ಮತ್ತು ಸೇವಾ ವಲಯದಲ್ಲಿ ಕೋವಿಡ್ 2ನೇ ಅಲೆಯ ಹೊರತಾಗಿಯೂ ಬೆಳವಣಿಗೆಗೆ ಸಹಾಯ ಮಾಡಿತು. ಭಾರತವು ಈ ವರ್ಷ ವಿಶ್ವದ ಅತಿ ವೇಗದ ಬೆಳವಣಿಗೆಯನ್ನು ಸಾಧಿಸುವ ಹಾದಿಯಲ್ಲಿದೆ. ಬೆಲೆಗಳ ವಿಷಯದಲ್ಲಿ, ಹಣದುಬ್ಬರವು 2020-21ರಲ್ಲಿ ಶೇಕಡಾ 6 ಕ್ಕಿಂತ ಹೆಚ್ಚಿತ್ತು. 2021-22 ರಲ್ಲಿ 5.5 ಕ್ಕಿಂತ ಹೆಚ್ಚಾಗುವ ಸಾಧ್ಯತೆಯಿದೆ. 2022-23ರ ಮೊದಲ ತ್ರೈಮಾಸಿಕದಲ್ಲೇ ಶೇ. 5 ಹೆಚ್ಚಳವನ್ನು ಅಂದಾಜಿಸಲಾಗಿದೆ ಎಂದು ಹೇಳಿದ್ದಾರೆ.