ನವದೆಹಲಿ: ಸಾರ್ವಜನಿಕ ವಲಯದ ಬ್ಯಾಂಕ್ಗಳ ಖಾಸಗೀಕರಣ ವಿರೋಧಿಸಿ ನೌಕರರು ನಡೆಸುತ್ತಿರುವ ಬ್ಯಾಂಕ್ ಮುಷ್ಕರ ಎರಡನೇ ಹಾಗೂ ಕೊನೆಯ ದಿನಕ್ಕೆ ಕಾಲಿಟ್ಟಿದ್ದು, ಬಹುತೇಕ ಹಣಕಾಸು ಸೇವೆಗಳ ಪರಿಣಾಮ ಬೀರಿದೆ.
ಸಾರ್ವಜನಿಕ ವಲಯದ ಬ್ಯಾಂಕ್ಗಳು ಹಾಗೂ ಹಳೆಯ ಖಾಸಗಿ ವಲಯದ ಬ್ಯಾಂಕ್ಗಳ ಸುಮಾರು ಹತ್ತು ಲಕ್ಷ ಉದ್ಯೋಗಿಗಳು ಕೆಲಸಕ್ಕೆ ಹಾಜರಾಗದೇ ಪ್ರತಿಭಟನೆಯಲ್ಲಿ ತೊಡಗಿಸಿಕೊಂಡಿದ್ದರು. ಮಂಗಳವಾರ ನಡೆದ ಮುಷ್ಕರದಲ್ಲಿ ವಿದೇಶಿ ಬ್ಯಾಂಕ್ಗಳ ನೌಕರರೂ ಭಾಗವಹಿಸಿದ್ದರು ಎಂದು ವರದಿಗಳು ತಿಳಿಸಿವೆ.
ಮುಷ್ಕರದಿಂದಾಗಿ ನಗದು ಹಿಂಪಡೆಯುವಿಕೆ, ಚೆಕ್ ಕ್ಲಿಯರೆನ್ಸ್ ಮತ್ತು ಇತರ ವ್ಯವಹಾರ ಸಂಬಂಧಿತ ವಹಿವಾಟುಗಳಂತಹ ಸೇವೆಗಳಿಗೆ ಹೊಡೆತ ಬಿದ್ದಿದೆ.
ಯುನೈಟೆಡ್ ಫೋರಂ ಆಫ್ ಬ್ಯಾಂಕ್ ಯೂನಿಯನ್ ಕರೆ ಕೊಟ್ಟ ಎರಡು ದಿನಗಳ ರಾಷ್ಟ್ರವ್ಯಾಪಿ ಮುಷ್ಕರ ಸೋಮವಾರ ಆರಂಭವಾಗಿದೆ. ಸುಮಾರು 16,500 ಕೋಟಿ ರೂ. ಮೌಲ್ಯದ ಎರಡು ಕೋಟಿ ಚೆಕ್ ಕ್ಲಿಯರೆನ್ಸ್ ಮೇಲೆ ಪ್ರತಿಭಟನೆ ಪರಿಣಾಮ ಬೀರಿದೆ.
ಇದನ್ನೂ ಓದಿ: ಭಾರತೀಯ ರೈಲ್ವೆ ಪ್ರತಿಯೊಬ್ಬನ ಆಸ್ತಿ, ಎಂದಿಗೂ ಅದು ಖಾಸಗೀಕರಣಗೊಳ್ಳಲ್ಲ : ಸಚಿವ ಗೋಯಲ್ ಸ್ಪಷ್ಟನೆ
ಪ್ರತಿಭಟನೆಯಿಂದ ಸರಾಸರಿ ಸುಮಾರು 16,500 ಕೋಟಿ ರೂ. ಮೌಲ್ಯದ ಸುಮಾರು 2 ಕೋಟಿ ಚೆಕ್ ಕ್ಲಿಯರೆನ್ಸ್ಗೆ ಹಿನ್ನಡೆಯಾಗಲಿದೆ. ಸರ್ಕಾರಿ ಖಜಾನೆ ಕಾರ್ಯಾಚರಣೆಗಳು ಮತ್ತು ಎಲ್ಲ ಸಾಮಾನ್ಯ ಬ್ಯಾಂಕಿಂಗ್ ವಹಿವಾಟುಗಳ ಮೇಲೆ ಪರಿಣಾಮ ಬೀರಿದೆ ಎಂದು ಅಖಿಲ ಭಾರತ ಬ್ಯಾಂಕ್ ನೌಕರರ ಸಂಘದ (ಎಐಬಿಇಎ) ಪ್ರಧಾನ ಕಾರ್ಯದರ್ಶಿ ಸಿ ಹೆಚ್ ವೆಂಕಟಾಚಲಂ ತಿಳಿಸಿದ್ದರು.
ಸುಮಾರು 10 ಲಕ್ಷ ಬ್ಯಾಂಕ್ ಉದ್ಯೋಗಿಗಳು ಹಾಗೂ ನೌಕರರು ತಮ್ಮ ಬ್ಯಾಂಕ್ಗಳನ್ನು ಖಾಸಗೀಕರಣಗೊಳಿಸುವ ಸರ್ಕಾರದ ನಿರ್ಧಾರ ಖಂಡಿಸಿದ್ದಾರೆ ಎಂಬುದಕ್ಕೆ ಪ್ರತಿಭಟನೆಗೆ ಸಿಕ್ಕ ಬೆಂಬಲವೇ ಸಾಕ್ಷಿ. ಎಲ್ಲ ಕೇಂದ್ರಗಳಲ್ಲಿ ಬ್ಯಾಂಕಿಂಗ್ ಕಾರ್ಯಾಚರಣೆಗಳ ಮೇಲೆ ಪರಿಣಾಮ ಬೀರುತ್ತಿವೆ ಎಂಬುದು ವಿವಿಧ ರಾಜ್ಯಗಳಿಂದ ನಮಗೆ ಮಾಹಿತಿ ತಲುಪಿದೆ ಎಂದರು.
ಅಖಿಲ ಭಾರತ ಬ್ಯಾಂಕ್ ನೌಕರರ ಸಂಘ (ಎಐಬಿಇಎ), ಅಖಿಲ ಭಾರತ ಬ್ಯಾಂಕ್ ಅಧಿಕಾರಿಗಳ ಒಕ್ಕೂಟ (ಎಐಬಿಒಸಿ), ಬ್ಯಾಂಕ್ ನೌಕರರ ರಾಷ್ಟ್ರೀಯ ಒಕ್ಕೂಟ (ಎನ್‌ಸಿಬಿಇ), ಅಖಿಲ ಭಾರತ ಬ್ಯಾಂಕ್ ಅಧಿಕಾರಿಗಳ ಸಂಘ (ಎಐಬಿಒಎ), ಭಾರತೀಯ ಬ್ಯಾಂಕ್ ನೌಕರರ ಒಕ್ಕೂಟ (ಬಿಇಎಫ್‌ಐ), ಇಂಡಿಯನ್ ನ್ಯಾಷನಲ್ ಬ್ಯಾಂಕ್ ಎಂಪ್ಲಾಯೀಸ್ ಫೆಡರೇಷನ್ (ಐಎನ್‌ಬಿಇಎಫ್), ಇಂಡಿಯನ್ ನ್ಯಾಷನಲ್ ಬ್ಯಾಂಕ್ ಆಫೀಸರ್ಸ್ ಒಕ್ಕೂಟ (ಐಎನ್‌ಬಿಒಸಿ), ನ್ಯಾಷನಲ್ ಆರ್ಗನೈಸೇಷನ್ ಆಫ್ ಬ್ಯಾಂಕ್ ವರ್ಕರ್ಸ್ (ಎನ್‌ಒಬಿಡಬ್ಲ್ಯೂ) ಮತ್ತು ನ್ಯಾಷನಲ್ ಆರ್ಗನೈಸೇಷನ್ ಆಫ್ ಬ್ಯಾಂಕ್ ಆಫೀಸರ್ಸ್ (ಎನ್‌ಒಬಿಒ) ಒಂಬತ್ತು ಒಕ್ಕೂಟಗಳು ಮುಷ್ಕರಕ್ಕೆ ಕರೆಕೊಟ್ಟಿವೆ.