ನವದೆಹಲಿ: ಬ್ಯಾಂಕ್ಗಳ ವಿಲೀನದ ಬಳಿಕ ಸಾರ್ವಜನಿಕ ವಲಯದ ವಿಮಾ ಕಂಪನಿಗಳನ್ನು ವಿಲೀನಗೊಳಿಸಲಾಗುವುದು ಎಂಬ ಆರೋಪ ಕೇಳಿ ಬಂದ ಹಿನ್ನೆಲೆಯಲ್ಲಿ ಈ ಬಗ್ಗೆ ಸ್ಪಷ್ಟನೆ ನೀಡಿರುವ ಕೇಂದ್ರ ಸರ್ಕಾರ ಇಂಥ ಯಾವುದೇ ಪ್ರಸ್ತಾಪ ಸರ್ಕಾರ ಮುಂದಿಲ್ಲ ಎಂದಿದೆ.
ಈ ಕುರಿತು ರಾಜ್ಯಸಭೆಗೆ ಲಿಖಿತ ಉತ್ತರ ನೀಡಿರುವ ಹಣಕಾಸು ಖಾತೆ ರಾಜ್ಯ ಸಚಿವ ಭಾಗವತ್ ಕೆ.ಕರದ್, ಸಾರ್ವಜನಿಕ ವಲಯದ ಸಾಮಾನ್ಯ ವಿಮಾ ಕಂಪನಿಗಳ ವಿಲೀನಕ್ಕೆ ಸರ್ಕಾರ ಯಾವುದೇ ರೀತಿಯ ಪ್ರಸ್ತಾಪ ಹೊಂದಿಲ್ಲ. ಈ ಬಗ್ಗೆ ಸರ್ಕಾರವೂ ಯಾವುದೇ ಪ್ರಕ್ರಿಯೆಗೆ ಮುಂದಾಗಿಲ್ಲ ಎಂದು ಸ್ಪಷ್ಟಪಡಿಸಿದರು.
ವಿವಿಧ ಹಣಕಾಸು ಸೇವೆಗಳನ್ನು ಒದಗಿಸಲು ಬ್ಯಾಂಕ್‌ಗಳು ಐಬಿಬಿಐಸಿ ಅನ್ನು ಸ್ಥಾಪಿಸಿಕೊಂಡಿವೆ. ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್‌ಬಿಐ) ಮತ್ತು ಕೆನರಾ ಬ್ಯಾಂಕ್ ವಿವಿಧ ಹಣಕಾಸು ಸೇವೆಗಳನ್ನು ಒದಗಿಸಲು ಐಬಿಬಿಐಸಿಯ ಭಾಗವಾಗಿವೆ. ವ್ಯಾಪಾರ ಸಂಬಂಧಿತ ವಹಿವಾಟುಗಳಲ್ಲಿ ಬ್ಲಾಕ್‌ಚೈನ್ ತಂತ್ರಜ್ಞಾನವನ್ನು ಬ್ಯಾಂಕ್‌ಗಳು ಅಳವಡಿಸಿಕೊಂಡಿವೆ ಎಂದು ಸರ್ಕಾರ ರಾಜ್ಯಸಭೆಗೆ ತಿಳಿಸಿದೆ.
ಪ್ರಸ್ತುತ ದೇಶದಲ್ಲಿ 4 ಸಾಮಾನ್ಯ ವಿಮಾ ಕಂಪನಿಗಳಾದ ನ್ಯೂ ಇಂಡಿಯಾ ಅಶ್ಯೂರೆನ್ಸ್ ಕಂಪನಿ, ನ್ಯಾಷನಲ್ ಇನ್ಶುರೆನ್ಸ್ ಕಂಪನಿ ಲಿಮಿಟೆಡ್ (NICL), ಯುನೈಟೆಡ್ ಇಂಡಿಯಾ ಇನ್ಶುರೆನ್ಸ್ ಕಂಪನಿ ಲಿಮಿಟೆಡ್ (UIICL) ಮತ್ತು ಓರಿಯಂಟಲ್ ಇನ್ಶುರೆನ್ಸ್ ಕಂಪನಿ ಲಿಮಿಟೆಡ್ (OICL) ಕಾರ್ಯನಿರ್ವಹಿಸುತ್ತಿವೆ.