ನವದೆಹಲಿ: ಕೊರೊನಾ ವೈರಸ್ ಹಬ್ಬಿದ ಹಿನ್ನೆಲೆಯಲ್ಲಿ ನಾಗರಿಕ ವಿಮಾನಯಾನ ಸಚಿವಾಲಯವು ಆಗಸ್ಟ್ 15ರವರೆಗೆ ದೇಶದಲ್ಲಿ ಅಂತಾರಾಷ್ಟ್ರೀಯ ವಿಮಾನಯಾನ ಕಾರ್ಯಾಚರಣೆ ಸ್ಥಗಿತಗೊಳಿಸಲು ನಿರ್ಧರಿಸಿದೆ.
ಕೋವಿಡ್-19 ಹರಡುವಿಕೆಯನ್ನು ತಡೆಯಲು ಭಾರತವು ಮಾರ್ಚ್ ಕೊನೆಯ ವಾರದಲ್ಲಿ ಎಲ್ಲಾ ವಿಮಾನ ಕಾರ್ಯಾಚರಣೆಯನ್ನು ಸ್ಥಗಿತಗೊಳಿಸಿತ್ತು. ಕಠಿಣ ಕ್ರಮಗಳನ್ನು ಅನುಸರಿಸಿ ಮೇ 25ರಂದು ದೇಶಿಯ ವಿಮಾನ ಕಾರ್ಯಾಚರಣೆ ಪುನರಾರಂಭಕ್ಕೆ ಅವಕಾಶ ನೀಡಿತ್ತು.
ಆಯ್ದ ಮಾರ್ಗಗಳಲ್ಲಿ ಅಂತಾರಾಷ್ಟ್ರೀಯ ವಿಮಾನಯಾನಕ್ಕೆ ಅವಕಾಶ ನೀಡಲು ಕೇಂದ್ರ ಸರ್ಕಾರ ಇಂದು ನಿರ್ಧರಿಸಿದೆ. "ಕೇಸ್- ಟು- ಕೇಸ್ ಆಧಾರದ ಮೇಲೆ ಸಮರ್ಥ ಪ್ರಾಧಿಕಾರವು ಆಯ್ದ ಮಾರ್ಗಗಳಲ್ಲಿ ಅಂತಾರಾಷ್ಟ್ರೀಯ ನಿಗದಿತ ವಿಮಾನಗಳ ಹಾರಾಟಕ್ಕೆ ಅನುಮತಿಸಬಹುದು ಎಂದು ನಾಗರಿಕ ವಿಮಾನಯಾನ ಸಚಿವಾಲಯ ಪ್ರಕಟಣೆಯಲ್ಲಿ ತಿಳಿಸಿದೆ.