ಮುಂಬೈ: ಖಾಸಗಿ ಮತ್ತು ಸಹಕಾರಿ ಬ್ಯಾಂಕ್ಗಳಲ್ಲಿನ ಎಲ್ಲ ಖಾತೆಗಳನ್ನು ಮುಚ್ಚಿ ಸಾರ್ವಜನಿಕ ವಲಯದ ಬ್ಯಾಂಕ್ಗಳಿಗೆ (ಪಿಎಸ್ಬಿ) ವರ್ಗಾಯಿಸಲು ಮಹಾರಾಷ್ಟ್ರ ಸರ್ಕಾರ ಆದೇಶ ನೀಡಿದೆ.
ಎಲ್ಲ ಸರ್ಕಾರಿ ಇಲಾಖೆಗಳು, ರಾಜ್ಯ ಸಾರ್ವಜನಿಕ ವಲಯ ಸಂಸ್ಥೆಗಳು ಮತ್ತು ಸ್ವಾಯತ್ತ ಸಂಸ್ಥೆಗಳು ತಿಂಗಳ ಅಂತ್ಯದ ವೇಳೆಗೆ ಈ ನಿಯಮವನ್ನು ಪಾಲಿಸುವಂತೆ ಅಧಿಸೂಚನೆ ಹೊರಡಿಸಲಾಗಿದೆ.
ನ್ಯಾಷನಲ್ ಸೈಕ್ಲೋನ್ ರಿಸ್ಕ್ ಮಿಟಿಗೇಶನ್ ಪ್ರಾಜೆಕ್ಟ್ ಎಂಬ ಒಂದು ಸರ್ಕಾರಿ ಇಲಾಖೆಯು ಆಕ್ಸಿಸ್ ಬ್ಯಾಂಕಿನಲ್ಲಿರುವ ತನ್ನ ಖಾತೆಗಳನ್ನು ಮುಚ್ಚಿ, ಅದನ್ನು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾಕ್ಕೆ ವರ್ಗಾಯಿಸಲು ನಿರ್ಧರಿಸಿದ ಎರಡು ದಿನಗಳ ನಂತರ ಈ ಕ್ರಮ ಕೈಗೊಳ್ಳಲಾಗಿದೆ. ಯೆಸ್ ಬ್ಯಾಂಕ್ ಬಿಕ್ಕಟ್ಟು ಭುಗಿಲೆದ್ದ ಒಂದು ವಾರದ ನಂತರ ಹಾಗೂ ಮೂರು ನಾಗರಿಕ ಸಂಸ್ಥೆಗಳ 1,125 ಕೋಟಿ ರೂ.ಗಳು ಬ್ಯಾಂಕಿನಲ್ಲಿ ಸಿಲುಕಿಕೊಂಡಿರುವುದು ಬೆಳಕಿಗೆ ಬಂದಮೇಲೆ ಖಾಸಗಿ ಬ್ಯಾಂಕ್ಗಳ ಅಕೌಂಟ್ಗಳನ್ನು ಮುಚ್ಚುವ ನಿರ್ಧಾರವನ್ನು ಮಹಾರಾಷ್ಟ್ರ ಸರ್ಕಾರ ತೆಗೆದುಕೊಂಡಿದೆ.
ಸಾರ್ವಜನಿಕರ ಹಣದ ಸುರಕ್ಷತೆ ದೃಷ್ಟಿಯ ಭಾಗವಾಗಿ ಈ ಕ್ರಮಕೈಗೊಳ್ಳಲಾಗಿದೆ. ಅಲ್ಲದೇ ಏಪ್ರಿಲ್ 1 ರೊಳಗೆ ಎಲ್ಲ ಸಂಬಳ, ಪಿಂಚಣಿ ಮತ್ತು ಇತರ ಖಾತೆಗಳನ್ನು 11 ರಾಷ್ಟ್ರೀಕೃತ ಬ್ಯಾಂಕ್ಗಳಲ್ಲಿ ಯಾವುದಾದರೂ ಒಂದಕ್ಕೆ ವರ್ಗಾಯಿಸಲು ಸರ್ಕಾರ ನಿರ್ದೇಶಿಸಿದೆ.
ವಿಶೇಷವೆಂದರೆ, ಖಾಸಗಿ ಬ್ಯಾಂಕ್ಗಳಲ್ಲಿನ ಖಾತೆಗಳನ್ನು ಮುಚ್ಚುವ ಮತ್ತು ಪಿಎಸ್‌ಬಿಗಳಿಗೆ ವರ್ಗಾಯಿಸುವ ಕ್ರಮಗಳನ್ನು ಮರುಪರಿಶೀಲಿಸುವಂತೆ ಭಾರತೀಯ ರಿಸರ್ವ್ ಬ್ಯಾಂಕ್ ಎಲ್ಲ ರಾಜ್ಯ ಸರ್ಕಾರಗಳಿಗೆ ಮನವಿ ಕಳುಹಿಸಿದ ಒಂದು ದಿನದ ನಂತರ ಈ ಕ್ರಮವು ಬಂದಿದೆ.
ಈ ಕ್ರಮವನ್ನು ಸಮರ್ಥಿಕೊಂಡಿರುವ ಮಹಾರಾಷ್ಟ್ರ ಸರ್ಕಾರ ಎರಡು ಕಾರಣಗಳನ್ನು ಉಲ್ಲೇಖಿಸಿದೆ. ಒಂದು ಕೇಂದ್ರ ಸರ್ಕಾರದ ಎಲ್ಲ ಯೋಜನೆಗಳನ್ನು ರಾಷ್ಟ್ರೀಕೃತ ಬ್ಯಾಂಕ್ಗಳ ಮೂಲಕ ಪ್ರಕ್ರಿಯೆಗೊಳಿಸಲಾಗುವುದು. ಮತ್ತೊಂದು ಖಾತೆಗಳನ್ನು ರಾಷ್ಟ್ರೀಕೃತ ಬ್ಯಾಂಕ್‌ಗೆ ಬದಲಾಯಿಸಲು ಆರ್‌ಬಿಐ 2019 ರ ಅಕ್ಟೋಬರ್ 31 ರಂದು ನೀಡಿದ ನಿರ್ದೇಶನವನ್ನು ಉಲ್ಲೇಖಿಸಿದೆ.
ಯೆಸ್ ಬ್ಯಾಂಕ್‌ಗೆ ಆರ್‌ಬಿಐ ನಿಷೇಧವನ್ನು ಹೇರಿದ ನಂತರ ಸರ್ಕಾರಿ ಬ್ಯಾಂಕ್ಗಳಲ್ಲಿ, ವಿಶೇಷವಾಗಿ ಎಸ್‌ಬಿಐಗೆ ಠೇವಣಿಗಳು ಪ್ರವಾಹದ ರೀತಿ ಹರಿದು ಬರುತ್ತಿವೆ ಎಂದು ಬ್ಯಾಂಕಿಂಗ್ ಮೂಲಗಳು ತಿಳಿಸಿವೆ.
ಈ ಕ್ರಮದಿಂದ (ಖಾಸಗಿ ಬ್ಯಾಂಕುಗಳಿಂದ ಪಿಎಸ್‌ಬಿಗಳಿಗೆ ಖಾತೆಗಳನ್ನು ಬದಲಾಯಿಸುವುದು) ಬ್ಯಾಂಕಿಂಗ್ ಮತ್ತು ಆರ್ಥಿಕ ಸ್ಥಿರತೆಯ ಮೇಲೆ ಪರಿಣಾಮ ಬೀರಬಹುದು ಎಂದು ಆರ್‌ಬಿಐ ರಾಜ್ಯಗಳಿಗೆ ಬರೆದ ಪತ್ರದಲ್ಲಿ ತಿಳಿಸಿದೆ.
"ಖಾಸಗಿ ಬ್ಯಾಂಕ್ಗಳನ್ನು ನಿಯಂತ್ರಿಸಲು ಮತ್ತು ಮೇಲ್ವಿಚಾರಣೆ ಮಾಡಲು ಆರ್‌ಬಿಐಗೆ ಅಧಿಕಾರವಿದೆ. ಈ ರೀತಿ ಮಾಡುವುದರಿಂದ ಠೇವಣಿದಾರರ ಹಣವು ಸುರಕ್ಷಿತವಾರುತ್ತದೆ. ಎಲ್ಲ ರಾಜ್ಯ ಇಲಾಖೆಗಳು, ಸಾರ್ವಜನಿಕ ಮತ್ತು ನಾಗರಿಕ ಸಂಸ್ಥೆಗಳು, ಸ್ವಾಯತ್ತ ಸಂಸ್ಥೆಗಳು ಮುಂದಿನ ಎರಡು ವಾರಗಳಲ್ಲಿ ತಮ್ಮ ಖಾತೆಗಳನ್ನು ಖಾಸಗಿ ಬ್ಯಾಂಕುಗಳಿಂದ ಪಿಎಸ್‌ಬಿಗಳಿಗೆ ವರ್ಗಾಯಿಸುತ್ತವೆ ಎಂಬ ನಂಬಿಕೆ ಇದೆ ಎಂದು ಆರ್‌ಬಿಐ ಹೇಳಿದೆ.