ಮುಂಬೈ: ಲಕ್ಷ್ಮಿ ವಿಲಾಸ್ ಬ್ಯಾಂಕ್ ಠೇವಣಿದಾರರ ಹಣ ಸುರಕ್ಷಿತವಾಗಿದೆ. ನಿಯಂತ್ರಕ ನಿಗದಿಪಡಿಸಿದ ಗಡುವಿನೊಳಗೆ ಡಿಬಿಎಸ್ ಬ್ಯಾಂಕ್ ಇಂಡಿಯಾ ಜೊತೆಗೆ ವಿಲೀನ ಪ್ರಕ್ರಿಯೆ ಪೂರ್ಣಗೊಳ್ಳುವ ವಿಶ್ವಾಸವಿದೆ ಎಂದು ಆರ್‌ಬಿಐ ನೇಮಕ ಮಾಡಿರುವ ಬ್ಯಾಂಕ್‌ನ ಆಡಳಿತಾಧಿಕಾರಿ ಟಿ.ಎನ್.ಮನೋಹರನ್ ಹೇಳಿದ್ದಾರೆ.
ಮಂಗಳವಾರ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (ಆರ್‌ಬಿಐ) ಕೆನರಾ ಬ್ಯಾಂಕ್‌ನ ಮಾಜಿ ಕಾರ್ಯನಿರ್ವಾಹಕೇತರ ಅಧ್ಯಕ್ಷ ಟಿ.ಎನ್.ಮನೋಹರನ್ ಅವರನ್ನು ಲಕ್ಷ್ಮಿ ವಿಲಾಸ್ ಬ್ಯಾಂಕ್‌ನ ನಿರ್ವಾಹಕರಾಗಿ ನೇಮಕ ಮಾಡಿತು. ಒಂದು ತಿಂಗಳ ತನಕ ನಗದು ಹಿಂಪಡೆಯುವಿಕೆ ಮಿತಿಯನ್ನು ಪ್ರತಿ ಖಾತೆಗೆ 25 ಸಾವಿರ ರೂ. ಮಿತಿ ಹೇರಲಾಗಿದೆ.
ಸುದ್ದಿಗಾರರೊಂದಿಗೆ ಮಾತನಾಡಿದ ಮನೋಹರನ್, ಡಿಸೆಂಬರ್ 16ರ ಗಡುವಿನ ಮೊದಲು ಬ್ಯಾಂಕ್ಅನ್ನು ಡಿಬಿಎಸ್ ಬ್ಯಾಂಕ್ ಇಂಡಿಯಾ ಜೊತೆಗೆ ವಿಲೀನಗೊಳಿಸುವ ವಿಶ್ವಾಸವಿದೆ. ಠೇವಣಿದಾರರ ಹಣ ಸುರಕ್ಷಿತವಾಗಿದೆ. ಮರುಪಾವತಿ ಮಾಡಲು ಬ್ಯಾಂಕ್ ಸಾಕಷ್ಟು ದ್ರವ್ಯತೆ ಹೊಂದಿದೆ ಎಂದು ಹೇಳಿದರು.
ಲಕ್ಷ್ಮಿ ವಿಲಾಸ್ ಬ್ಯಾಂಕ್ 20,000 ಕೋಟಿ ರೂ. ಠೇವಣಿ ಮತ್ತು 17,000 ಕೋಟಿ ರೂ. ಮುಂಗಡ ಮೊತ್ತ ಹೊಂದಿದೆ. ಆರ್‌ಬಿಐ ಅಂತಿಮ ವಿಲೀನ ಕರಡನ್ನು ನವೆಂಬರ್ 20ರಂದು ನೀಡಲಿದೆ.