ಎತ್ತಿನಹೊಳೆ ಯೋಜನೆ’ಗೆ 1500 ಕೋಟಿ ರೂ. ಅನುದಾನ. ಮೊದಲನೆಯ ಹಂತದ ಲಿಫ್ಟ್ ಕಂಪೋನೆಂಟ್ ಕಾಮಗಾರಿಗಳನ್ನು ಪೂರ್ಣಗೊಳಿಸಿ ಮುಂದಿನ ಮುಂಗಾರು ಹಂಗಾಮಿನಲ್ಲಿ ಪ್ರಾಯೋಗಿಕವಾಗಿ ಚಾಲನೆಗೊಳಿಸಲು ಕ್ರಮ.
ಹೂಳು ತುಂಬಿರುವ ತುಂಗಭದ್ರಾ ಜಲಾಶಯದ ನೀರಿನ ಸಂಗ್ರಹಣಾ ಸಾಮರ್ಥ್ಯ ಕೊರತೆ ನೀಗಿಸಲು ಪರ್ಯಾಯ ಹರಿವು ನಾಲೆ ಮೂಲಕ ನವಲೆ ಹತ್ತಿರ ಸಮತೋಲನಾ ಜಲಾಶಯ ನಿರ್ಮಾಣದ ವಿಸ್ತೃತ ಯೋಜನಾ ವರದಿ ತಯಾರಿಕೆಗೆ 20 ಕೋಟಿ ರೂ. ಅನುದಾನ ನೀಡುವುದಾಗಿ ವಿವರಿಸಿದರು.
ಇದರೊಂದಿಗೆ ಮನೆಗೆ ಕುಡಿಯುವ ನೀರು ಯೋಜನೆ, ರಾಯಚೂರು, ಯಾದಗಿರಿ, ಕಲಬುರಗಿ ಜಿಲ್ಲೆಗೆ ಕುಡಿಯುವ ನೀರು ಪೂರೈಕೆಗೆ ತಿಂತಿಣಿ ಬ್ರಿಡ್ಜ್ ಬಳಿ ಕೃಷ್ಣಾ ನದಿಗೆ ಜಲಾಶಯ ನಿರ್ಮಾಣ - ವಿಸ್ತೃತ ಯೋಜನಾ ವರದಿ ತಯಾರಿಕೆಗೆ ಕ್ರಮಕ್ಕೆ ನಿರ್ಧರಿಸಲಾಗಿದೆ.
ಜಲಸಂಪನ್ಮೂಲ ಇಲಾಖೆಯ ಮೂಲಕ ಒಂದು ಲಕ್ಷ ಎಕರೆ ಜಮೀನಿಗೆ ನೀರಾವರಿ ಸೌಲಭ್ಯ ನೀಡಲು ಸರ್ಕಾರ ಈ ಬಾರಿ ಚಿಂತಿಸಿದೆ.
ಮಣ್ಣು ಮತ್ತು ನೀರು ಪರೀಕ್ಷೆ ಹಾಗೂ ರೈತರಿಗೆ ತಾಂತ್ರಿಕ ನೆರವು ನೀಡಲು ಸಂಚಾರಿ ಕೃಷಿ ಹೆಲ್ತ್ ಕ್ಲಿನಿಕ್ ಪ್ರಾರಂಭಿಸಲು ಸರ್ಕಾರ ನಿರ್ಧರಿಸಿದೆ.
ಕರಾವಳಿ ಪ್ರದೇಶದಲ್ಲಿ ಪಶ್ಚಿಮ ಘಟ್ಟದ ನದಿಗಳಿಗೆ ಅಡ್ಡಲಾಗಿ 'ಕಿಂಡಿ ಅಣೆಕಟ್ಟು ಯೋಜನೆ'ಗಳ ವ್ಯಾಪಕ ಅನುಷ್ಠಾನಕ್ಕೆ ಮಾಸ್ಟರ್ ಪ್ಲಾನ್ ರೂಪಿಸಲಾಗಿದ್ದು, ಸೂಕ್ಷ್ಮ ನೀರಾವರಿಗೆ 627 ಕೋಟಿ ರೂ. ಅನುದಾನ. ರಾಜ್ಯದ ಪ್ರತಿ ಗ್ರಾಮದಲ್ಲಿ “ಜಲಗ್ರಾಮ ಕ್ಯಾಲೆಂಡರ್” ಸಿದ್ಧಪಡಿಸಲು ಸಿಎಂ ಚಿಂತಿಸಿದ್ದಾರೆ.
ಅಂತರ್ಜಲ ಸ್ಥಿತಿ ಗಂಭೀರವಾಗಿರುವ 76 ತಾಲೂಕುಗಳಲ್ಲಿ ಮುಂದಿನ ಮೂರು ವರ್ಷದಲ್ಲಿ ನಾಲ್ಕು ಲಕ್ಷ ಹೆಕ್ಟೇರ್‌ನಲ್ಲಿ 810 ಅತಿ ಸಣ್ಣ ಜಲಾನಯನಗಳಲ್ಲಿ ಜಲಾಮೃತ ಯೋಜನೆ ಅನುಷ್ಠಾನ. ವಿಶ್ವಬ್ಯಾಂಕ್ ಅನುದಾನಿತ ಹೊಸ ಬಹು-ರಾಜ್ಯ ಜಲಾನಯನ ಅಭಿವೃದ್ಧಿ ಯೋಜನೆಯಲ್ಲಿ ಮುಂದಿನ ಆರು ವರ್ಷದ ಅವಧಿಗೆ ಕರ್ನಾಟಕ ರಾಜ್ಯ ಭಾಗಿಯಾಗುವುದಾಗಿ ಸಿಎಂ ಬಜೆಟ್ನಲ್ಲಿ ಘೋಷಣೆ ಮಾಡಿದ್ದಾರೆ.