ಬೆಂಗಳೂರು: ಅತಿಥಿ ಉಪನ್ಯಾಸ ನೀಡಿ ಗಳಿಸುವ ಆದಾಯವೂ ಸರಕು ಮತ್ತು ಸೇವಾ ತೆರಿಗೆ (ಜಿಎಸ್ಟಿ) ವ್ಯಾಪ್ತಿಗೆ ಬರುತ್ತದೆ. ಅದರ ಮೇಲೆ ಶೇಕಡಾ 18ರಷ್ಟು ಜಿಎಸ್ಟಿ ವಿಧಿಸಲಾಗುತ್ತದೆ ಎಂದು ಕರ್ನಾಟಕದ ಸುಧಾರಿತ ಆಡಳಿತ ಪ್ರಾಧಿಕಾರ (Authority for Advance Ruling) ತಿಳಿಸಿದೆ.
ಬೆಂಗಳೂರಿನ ರಾಷ್ಟ್ರೀಯ ಕಾನೂನು ಶಾಲೆಯಲ್ಲಿ ಪ್ರಾಧ್ಯಾಪಕರಾಗಿರುವ ಸಾಯಿರಾಂ ಗೋಪಾಲಕೃಷ್ಣ ಭಟ್ ಅವರು ಅತಿಥಿ ಉಪನ್ಯಾಸಗಳನ್ನು ನೀಡಿ ಆದಾಯ ಗಳಿಸುತ್ತಿದ್ದರು. ಈ ಆದಾಯದ ಮೇಲೆ ಜಿಎಸ್ಟಿ ವಿನಾಯಿತಿ ಕೋರಲು, ಕೆಲವೊಂದು ಸ್ಪಷ್ಟನೆಗಳನ್ನು ಸುಧಾರಿತ ಆಡಳಿತ ಪ್ರಾಧಿಕಾರವನ್ನು ಕೇಳಿದ್ದರು.
ಅತಿಥಿ ಉಪನ್ಯಾಸಗಳನ್ನು ನಡೆಸಿ, ಗಳಿಸುವ ಆದಾಯ ಅಥವಾ ಕೇಂದ್ರ ಮತ್ತು ರಾಜ್ಯ ಸರ್ಕಾರದ ಸಚಿವಾಲಯಗಳು ನೀಡುವ ಸಂಶೋಧನಾ ತರಬೇತಿಗಳಲ್ಲಿ ಭಾಗವಹಿಸಿ, ಉಪನ್ಯಾಸ ನೀಡುವ ಮೂಲಕ ಗಳಿಸುವ ಆದಾಯ ಜಿಎಸ್ಟಿ ವ್ಯಾಪ್ತಿಗೆ ಬರುತ್ತದೆಯೇ ಎಂಬ ಕುರಿತು ಸುಧಾರಿತ ಆಡಳಿತ ಪ್ರಾಧಿಕಾರಕ್ಕೆ ಸ್ಪಷ್ಟನೆ ಕೇಳಿ ಅರ್ಜಿ ಸಲ್ಲಿಸಲಾಗಿತ್ತು.
ಈ ಅರ್ಜಿ ವಿಚಾರಣೆ ನಡೆಸಿದ ಸುಧಾರಿತ ಆಡಳಿತ ಪ್ರಾಧಿಕಾರ, ಅತಿಥಿ ಉಪನ್ಯಾಸಗಳ ಮೇಲೆ ಗಳಿಸಿದ ಆದಾಯದ ಮೇಲೆ ಜಿಎಸ್ಟಿ ವಿಧಿಸಲಾಗುತ್ತದೆ. ಆದರೆ ಯಾವ ರೀತಿಯ ಉಪನ್ಯಾಸ ಎಂಬುದನ್ನು ಆಧರಿಸಿ ಜಿಎಸ್ಟಿ ವಿಧಿಸಲಾಗುತ್ತದೆ. ಒಂದು ವೇಳೆ ಕಲೆ, ಕ್ರೀಡೆ ಮತ್ತು ಸಂಸ್ಕೃತಿಯ ಬಗ್ಗೆ ಉಪನ್ಯಾಸಗಳನ್ನು ನೀಡಿದರೆ, ಆ ಆದಾಯದ ಮೇಲೆ ಜಿಎಸ್ಟಿ ವಿನಾಯಿತಿ ನೀಡಲಾಗುತ್ತದೆ. ಆದರೆ ಅರ್ಜಿದಾರರು ಕಾನೂನು ಮತ್ತು ಕಾನೂನು ಅರಿವಿನ ಬಗ್ಗೆ ಅತಿಥಿ ಉಪನ್ಯಾಸಗಳನ್ನು ನೀಡುತ್ತಿದ್ದಾರೆ. ಆದ್ದರಿಂದ ಅವರ ಅತಿಥಿ ಉಪನ್ಯಾಸದ ಆದಾಯದ ಮೇಲೆ ಜಿಎಸ್ಟಿ ವಿನಾಯಿತಿ ನೀಡಲು ಸಾಧ್ಯವಿಲ್ಲ ಎಂದು ಸ್ಪಷ್ಟಪಡಿಸಿತ್ತು.
ಇದನ್ನೂ ಓದಿ: ಎಸ್ಬಿಐಗಿಂತ ಹೆಚ್ಚಾಗಿ ಎಲ್ಐಸಿಗೆ ಹರಿದು ಹೋಗುತ್ತಿದೆ ಭಾರತೀಯರ ಉಳಿತಾಯದ ಹಣ: ಯುಬಿಎಸ್ ವರದಿ
ವೃತ್ತಿಪರ, ತಾಂತ್ರಿಕ ಮತ್ತು ವ್ಯಾಪಾರ ಸೇವೆಗಳ ಅಡಿಯಲ್ಲಿ ನೀಡುವ ಉಪನ್ಯಾಸಗಳು ಶೇಕಡಾ 18ರಷ್ಟು ಜಿಎಸ್ಟಿಗೆ ಒಳಪಟ್ಟಿರುತ್ತವೆ. ಆದರೆ ಕೇಂದ್ರ ಸರ್ಕಾರ, ರಾಜ್ಯ ಸರ್ಕಾರ, ಕೇಂದ್ರಾಡಳಿತ ಪ್ರದೇಶಗಳ ಸರ್ಕಾರಕ್ಕೆ ಅಧೀನದಲ್ಲಿ ಬರುವ ಸಂಸ್ಥೆಗಳಿಗೆ ಒದಗಿಸಿದ ಸೇವೆಗಳಿಗೆ ಜಿಎಸ್ಟಿ ಇರುವುದಿಲ್ಲ ಎಂದು ಇದೇ ವೇಳೆ ಸುಧಾರಿತ ಆಡಳಿತ ಪ್ರಾಧಿಕಾರ ಹೇಳಿದೆ.