ಕೋಲ್ಕತಾ: ಕಣಿವೆ ರಾಜ್ಯದಲ್ಲಿ ಪರಿಸ್ಥಿತಿ ಸುಧಾರಣೆಗೊಂಡರೆ ಜಮ್ಮು ಮತ್ತು ಕಾಶ್ಮೀರ ಪ್ರದೇಶಗಳಲ್ಲಿ ಬಂಡವಾಳ ಹೂಡಿಕೆ ಮಾಡಲು ಜಪಾನ್ ಸಿದ್ಧವಾಗಿದೆ ಎಂದು ಭಾರತದಲ್ಲಿನ ಜಪಾನ್ ರಾಯಭಾರಿ ಕೆಂಜಿ ಹಿರಾಮಾಟ್ಸು ಭರವಸೆ ನೀಡಿದ್ದಾರೆ.
ಇಲ್ಲಿನ ಬಂಗಾಳ ವಾಣಿಜ್ಯ ಮತ್ತು ಕೈಗಾರಿಕಾ ಮಂಡಳಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಭಾರತದ ಕಣಿವೆ ರಾಜ್ಯದಲ್ಲಿ "ಸಕಾರಾತ್ಮಕ ಅಭಿವೃದ್ಧಿ"ಯನ್ನು ನಾವೂ ಎದುರು ನೋಡುತ್ತಿದ್ದೇವೆ. ಅಲ್ಲಿನ ಪರಿಸ್ಥಿತಿ ಸಾಮಾನ್ಯವಾಗಲಿದೆ ಎಂಬ ಆಶಾ ಭಾವನೆ ನನಗೂ ಇದೆ. ಭಾರತ ಸರ್ಕಾರ ತೆಗೆದುಕೊಂಡ ನಿರ್ಧಾರ ಮುಂದೆ ಏನಾಗಲಿದೆ ಎಂಬುದನ್ನು ಕುತೂಹಲದಿಂದ ನೋಡುತ್ತಿದ್ದೇವೆ ಎಂದು ಹೇಳಿದರು.
ಆರಂಭಿಕ ಹಂತದಲ್ಲಿ ನಾವು ಖಚಿತವಾಗಿ ಏನನ್ನೂ ಹೇಳಲಾರೆವು. ಜಪಾನ್, ಭಾರತದೊಂದಿಗೆ ಉತ್ತಮ ವ್ಯವಹಾರಿಕ ಸಂಬಂಧ ಹೊಂದಿದೆ. ಭಾರತದ ಯಾವುದೇ ಭಾಗಗಳಲ್ಲಿ ವ್ಯಾಪಾರ ಮಾಡುವ ಸಾಧ್ಯತೆಯಿದೆ ಎಂದು ಭರವಸೆ ನೀಡಿದರು.