ನವದೆಹಲಿ: ಪ್ರಸಕ್ತ ಆರ್ಥಿಕ ವರ್ಷವು ಮಾರ್ಚ್ 31ಕ್ಕೆ ಕೊನೆ ಆಗಲಿದ್ದು, ವರ್ಷಾಂತ್ಯದ ತೆರಿಗೆ ಸಂಗ್ರಹದ ಗುರಿ ತಲುಪಲು ಆದಾಯ ತೆರಿಗೆ ಹಾಗೂ ಜಿಎಸ್‌ಟಿ ತೆರಿಗೆಯ ಎಲ್ಲ ಕಚೇರಿಗಳು ಶನಿವಾರ ಮತ್ತು ಭಾನುವಾರವೂ ತೆರೆದಿರಲಿವೆ.
ಈ ಹಿಂದಿನ ಪದ್ಧತಿಯಂತೆ ಸೆಂಟ್ರಲ್ ಬೋರ್ಡ್ ಆಫ್ ಇಂಡೈರೆಕ್ಟ್ ಟ್ಯಾಕ್ಸಸ್ ಆ್ಯಂಡ್ ಕಸ್ಟಂಸ್ನ (ಸಿಬಿಐಸಿ) ಎಲ್ಲ ವಲಯದ ಹಾಗೂ ಕ್ಷೇತ್ರೀಯ ಕಚೇರಿಗಳು ಮಾರ್ಚ್ ಮಾರ್ಚ್ 30 ಹಾಗೂ 31ರ ವಾರಾಂತ್ಯದ ಶನಿವಾರ ಮತ್ತು ಭಾನುವಾರವೂ ತೆರಿಗೆ ಪಾವತಿದಾರರ ಸೇವೆಗಾಗಿ ತೆರೆದಿರುತ್ತವೆ ಎಂದು ಸಿಬಿಐಸಿ ತಿಳಿಸಿದೆ.
2018-19ರ ಆರ್ಥಿಕ ವರ್ಷದ ವಿಳಂಬಿತ/ ಪರಿಷ್ಕೃತ ತೆರಿಗೆ ಸಲ್ಲಿಕೆಗೆ ಮಾರ್ಚ್ 31 ಕೊನೆಯ ದಿನವಾಗಲಿದೆ. ವರ್ಷಾಂತ್ಯದ ಲೆಕ್ಕಾಚಾರಗಳನ್ನು ಸುಗಮಗೊಳಿಸಲು ಎರಡೂ ರಜಾದಿನಗಳನ್ನು ಆದಾಯ ತೆರಿಗೆ ಇಲಾಖೆ ಬಳಸಿಕೊಳ್ಳುತ್ತಿದೆ.
ಕೇಂದ್ರೀಯ ನೇರ ತೆರಿಗೆಗಳ ಮಂಡಳಿ (ಸಿಬಿಡಿಟಿ) ಕೂಡ ಆದಾಯ ಪಾವತಿ ತೆರಿಗೆದಾರರ ಸೇವೆಗಾಗಿ ಹೆಚ್ಚುವರಿ ಕೌಂಟರ್‌ಗಳನ್ನು ತೆರೆದಿದ್ದು ರಜಾದಿನದಲ್ಲಿ ಸಹ ಕಾರ್ಯನಿರ್ವಹಿಸುತ್ತಿವೆ. ಸಾರ್ವಜನಿಕರು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಕೋರಿದೆ.
ಪ್ರಸಕ್ತ ಹಣಕಾಸು ವರ್ಷದಲ್ಲಿ ಸರ್ಕಾರ ಒಟ್ಟು ₹ 11.47 ಲಕ್ಷ ಕೋಟಿ ಜಿಎಸ್‌ಟಿ ಸಂಗ್ರಹಿಸಿದೆ. ಅದೇ ವೇಳೆ ನೇರ ತೆರಿಗೆ ಸಂಗ್ರಹಣೆ ಮೊತ್ತ ₹ 12 ಲಕ್ಷ ಕೋಟಿಗಳಷ್ಟಾಗಿದೆ. 2019ರ ಫೆಬ್ರವರಿ ಅಂತ್ಯದ ವರೆಗಿನ ಜಿಎಸ್‌ಟಿಯ ಒಟ್ಟು ಸಂಗ್ರಹಣೆ ಮೊತ್ತ ₹ 10.70 ಲಕ್ಷ ಕೋಟಿ ಆಗಿದೆ.