ನವದೆಹಲಿ: ಇಂಡಿಯನ್ ಆಯಿಲ್ ಕಾರ್ಪೊರೇಷನ್ನಂತಹ ಯಾವುದೇ ಸಾರ್ವಜನಿಕ ವಲಯದ ಸಂಸ್ಥೆಯು ಭಾರತ್ ಪೆಟ್ರೋಲಿಯಂ ಖರೀದಿಗೆ ಬಿಡ್ ಸಲ್ಲಿಸುವುದಿಲ್ಲ ಎಂದು ಕೇಂದ್ರ ಇಂಧನ ಸಚಿವ ಧರ್ಮೇಂದ್ರ ಪ್ರಧಾನ್ ಸ್ಪಷ್ಟನೆ ನೀಡಿದ್ದಾರೆ.
ಬುಧವಾರ ಭಾರತ್ ಪೆಟ್ರೋಲಿಯಂ ಕಾರ್ಪೊರೇಷನ್ ಲಿಮಿಟೆಡ್, ಶಿಪ್ಪಿಂಗ್ ಸಂಸ್ಥೆ ಎಸ್‌ಸಿಐ ಮತ್ತು ಆನ್‌ಲ್ಯಾಂಡ್ ಕಾರ್ಗೋ ಮೂವರ್ ಕಾನ್ಕಾರ್ನಲ್ಲಿನ ಸರ್ಕಾರದ ಪಾಲನ್ನು ಮಾರಾಟ ಮಾಡಲು ಕೇಂದ್ರ ಆರ್ಥಿಕ ವ್ಯವಹಾರಗಳ ಸಂಪುಟ ಸಮಿತಿಯು (ಸಿಸಿಇಎ) ಅನುಮೋದನೆ ನೀಡಿತ್ತು. ಇದರ ಜೊತೆಗೆ ಆಯ್ದ ಕೆಲವು ಕೇಂದ್ರೀಯ ಸಾರ್ವಜನಿಕ ವಲಯದ ಉದ್ಯಮಗಳಲ್ಲಿನ (ಸಿಪಿಎಸ್‌ಇ) ಸರ್ಕಾರದ ಪಾಲನ್ನು ಶೇ 51ಕ್ಕಿಂತ ಕಡಿಮೆಗೊಳಿಸುವ ಪ್ರಸ್ತಾಪವನ್ನು ಅದು ಅಂಗೀಕರಿಸಿತ್ತು.
ದೇಶದ ಅತಿದೊಡ್ಡ ತೈಲ ಸಂಗ್ರಹ ಮಾರಾಟಗಾರ ಭಾರತ್ ಪೆಟ್ರೋಲಿಯಂನ ಸುಮಾರು 90,000 ಕೋಟಿ ಮೌಲ್ಯದ ಷೇರು ಖರೀದಿಗೆ ಇಂಡಿಯನ್ ಆಯಿಲ್ ಕಾರ್ಪೊರೇಷನ್ ಬಿಡ್ ಸಲ್ಲಿಸಲಿದೆ ಎಂಬ ಮಾತುಗಳು ಕೇಳಿಬಂದಿದ್ದವು.
ಈ ಬಗ್ಗೆ ಪ್ರತಿಕ್ರಿಯಿಸಿದ ಪ್ರಧಾನ್, 2014ರಿಂದ ವ್ಯವಹಾರಿಕ ಚಟುವಟಿಕೆಯಲ್ಲಿ ಕೇಂದ್ರ ಸರ್ಕಾರ ಸ್ಪಷ್ಟವಾದ ಗುರಿ ಇರಿಸಿಕೊಂಡು ಬರುತ್ತಿದೆ. ಟೆಲಿಕಾಂ ಮತ್ತು ವಾಯುಯಾನದಂತಹ ವಲಯಗಳನ್ನು ಖಾಸಗಿ ಸಹಭಾಗಿತ್ವ ಪಡೆಯುವ ಮುನ್ನ ಗ್ರಾಹಕರ ಉಪಯೋಗವನ್ನು ದೃಷ್ಟಿಯಲ್ಲಿ ಇರಿಸಿಕೊಂಡು ಬೆಲೆ ಕಡಿತ, ಪಾರದರ್ಶಕತೆ ಮತ್ತು ಉತ್ತಮ ಸೇವೆಗಳಿಗೆ ಆದ್ಯತೆ ನೀಡಿದ್ದೇವೆ. ಇಂತಹದೆ ದೃಷ್ಟಿಕೋನದಿಂದ ನಿನ್ನೆ (ಬುಧವಾರ) ನಿರ್ಧಾರ ತೆಗೆದುಕೊಂಡಿದ್ದೇವೆ ಎಂದರು.