ನವದೆಹಲಿ: ಚಳಿಗಾಲ ಅಧಿವೇಶನದ ಮೂರನೇ ದಿನವಾದ ಇಂದು (ಬುಧವಾರ) ಕಣಿವೆ ರಾಜ್ಯದಲ್ಲಿ ಇಂಟರ್ನೆಟ್ ಸೇವೆ ಮರು ಸಂಪರ್ಕ ಕಲ್ಪಿಸುವ ಕುರಿತು ಗೃಹ ಸಚಿವ ಅಮಿತ್ ಶಾ ಹಾಗೂ ರಾಜ್ಯಸಭೆಯ ಪ್ರತಿಪಕ್ಷದ ನಾಯಕ ಗುಲಾಮ್ ನಬಿ ಆಜಾದ್ ನಡುವೆ ವಾಕ್ ಸಮರ ನಡೆಯಿತು.
ರಾಷ್ಟ್ರದ ಸುರಕ್ಷತೆಯನ್ನು ಗಮನದಲ್ಲಿಟ್ಟುಕೊಂಡು ಅಂತರ್ಜಾಲ ಸೇವೆಗಳ ಮೇಲೆ ನಿರ್ಧಾರ ತೆಗೆದುಕೊಳ್ಳುವುದು ಅಗತ್ಯವಾಗಿದೆ. ಸ್ಥಳೀಯ ಪ್ರಾಧಿಕಾರವು ಸೂಕ್ತವೆಂದು ಭಾವಿಸಿದರೆ ಕಣಿವೆ ರಾಜ್ಯದಲ್ಲಿ ಇಂಟರ್ನೆಟ್ ಮೇಲಿನ ನಿರ್ಬಂಧ ತೆಗೆದು ಹಾಕಲಾಗುತ್ತದೆ ಎಂದು ಅಮಿತ್ ಶಾ ಹೇಳಿದರು.
ಇದು ದೇಶದ ಭದ್ರತೆಯ ಪ್ರಶ್ನೆ, ಭಯೋತ್ಪಾದನೆ ವಿರುದ್ಧದ ಹೋರಾಟದ ಪ್ರಶ್ನೆ, ಜನರ ಭದ್ರತೆಯ ಪ್ರಶ್ನೆ. ಸ್ಥಳೀಯ ಆಡಳಿತವು ಸೂಕ್ತವೆಂದು ಭಾವಿಸಿದಾಗಲೆಲ್ಲಾ ನಾವು ಅದರ ಬಗ್ಗೆ ಪುನರ್ವಿಮರ್ಶಿಸುತ್ತೇವೆ ಎಂದರು.
"ಪೆಟ್ರೋಲ್, ಡೀಸೆಲ್, ಸೀಮೆಎಣ್ಣೆ, ಎಲ್‌ಪಿಜಿ ಮತ್ತು ಅಕ್ಕಿಯ ಲಭ್ಯತೆ ಸಮರ್ಪಕವಾಗಿದೆ. 22 ಲಕ್ಷ ಮೆಟ್ರಿಕ್ ಟನ್ ಸೇಬು ಉತ್ಪಾದನೆಯಾಗುವ ನಿರೀಕ್ಷೆಯಿದೆ. ಎಲ್ಲಾ ಲ್ಯಾಂಡ್‌ಲೈನ್‌ಗಳು ಮುಕ್ತವಾಗಿ ಕಾರ್ಯನಿರ್ವಹಿಸುತ್ತಿವೆ ಎಂದು ಹೇಳಿದರು.
ನಾನು ಪ್ರಸ್ತಾಪಿಸಿದ ಈ ಸಂಗತಿಗಳನ್ನು ಎದುರಿಸಲು ಗುಲಾಮ್ ನಬಿ ಆಜಾದ್ ಸಹಾಬ್ಗೆ ನಾನು ಸವಾಲು ಹಾಕುತ್ತೇನೆ. ಈ ಅಂಕಿಅಂಶಗಳ ದಾಖಲೆಯ ಬಗ್ಗೆ ನೀವು ಏಕೆ ಆಕ್ಷೇಪಿಸುವುದಿಲ್ಲ? ಈ ವಿಷಯದ ಬಗ್ಗೆ ಒಂದು ಗಂಟೆ ಚರ್ಚಿಸಲು ನಾನು ಸಿದ್ಧನಿದ್ದೇನೆ ಎಂದು ಗುಜಾಮ್ ನಬಿ ಅವರನ್ನು ಕಿಚಾಯಿಸಿದರು. ಶಾ ಅವರ ಹೇಳಿಕೆ ಪ್ರತಿಕ್ರಿಯಿಸಿದ ಆಜಾದ್ ಎದ್ದು, ಕಣಿವೆ ರಾಜ್ಯದ ವಿದ್ಯಾರ್ಥಿಗಳು ಇಂಟರ್ನೆಟ್ ಸೇವೆಗಳಿಲ್ಲದೆ ತಮ್ಮ ಶಿಕ್ಷಣವನ್ನು ಹೇಗೆ ಮುಂದುವರಿಸಲು ಸಾಧ್ಯವಾಗುತ್ತದೆಯೇ ಎಂದು ಪ್ರಶ್ನಿಸಿದರು.
ಇಂಟರ್ನೆಟ್ ಸೇವೆಯ ಅವಶ್ಯಕತೆ ಒಪ್ಪಿಕೊಂಡ ಗೃಹ ಸಚಿವರು, ರಾಷ್ಟ್ರೀಯ ಭದ್ರತೆ, ಜಮ್ಮು ಮತ್ತು ಕಾಶ್ಮೀರ ಜನರ ಸುರಕ್ಷತೆ ಹಾಗೂ ಭಯೋತ್ಪಾದನೆ ವಿರುದ್ಧ ಹೋರಾಡುವ ಪ್ರಶ್ನೆ ಬಂದಾಗ ನಾವು ನಮ್ಮ ಅವಶ್ಯಕತೆಗಳಿಗೆ ಆದ್ಯತೆ ನೀಡಬೇಕುಗುತ್ತದೆ ಎಂದು ಪ್ರತ್ಯುತ್ತರ ನೀಡಿದರು.