ನವದೆಹಲಿ : ಅದಿರು, ಕಬ್ಬಿಣ ಮತ್ತು ಉಕ್ಕು, ಅಲ್ಯೂಮಿನಿಯಂ ಮತ್ತು ತಾಮ್ರದ ಸಾಗಣೆಯಲ್ಲಿನ ಆರೋಗ್ಯಕರ ಬೆಳವಣಿಗೆಯಿಂದಾಗಿ ಚೀನಾಕ್ಕೆ ಭಾರತದ ರಫ್ತು ಪ್ರಮಾಣ ಕಳೆದ ವರ್ಷದ 17.9 ಬಿಲಿಯನ್ ಡಾಲರ್‌ನಿಂದ 2020ರಲ್ಲಿ 20.157 ಬಿಲಿಯನ್ ಡಾಲರ್‌ಗೆ ಏರಿಕೆಯಾಗಿದೆ ಎಂದು ವಾಣಿಜ್ಯ ಸಚಿವಾಲಯದ ಅಂಕಿ-ಅಂಶಗಳು ತಿಳಿಸಿವೆ.
ನೆರೆಯ ದೇಶದಿಂದ ಆಮದು ಪ್ರಮಾಣ ಶೇ.10.87ರಷ್ಟು ಕುಸಿದಿದೆ. 2019ರಲ್ಲಿ 74.92 ಬಿಲಿಯನ್ ಡಾಲರ್‌ನಿಂದ 66.78 ಬಿಲಿಯನ್ ಡಾಲರ್‌ಗೆ ತಲುಪಿದೆ. ಚೀನಾದೊಂದಿಗಿನ ವ್ಯಾಪಾರ ಕೊರತೆ 2019ರಲ್ಲಿ 56.95 ಬಿಲಿಯನ್ ಡಾಲರ್‌ನಿಂದ 2020ರಲ್ಲಿ 45.91 ಬಿಲಿಯನ್ ಡಾಲರ್‌ಗೆ ಇಳಿದಿದೆ ಎಂಬುದು ದತ್ತಾಂಶದಿಂದ ತಿಳಿದು ಬಂದಿದೆ.
ಹಿಂದಿನ ವರ್ಷದ 92.89 ಶತಕೋಟಿ ಡಾಲರ್‌ಗೆ ಹೋಲಿಸಿದರೆ 2020ರಲ್ಲಿ ದ್ವಿಪಕ್ಷೀಯ ವ್ಯಾಪಾರವು ಶೇ.5.64ರಷ್ಟು ಇಳಿದು, 87.65 ಶತಕೋಟಿಗೆ ತಲುಪಿದೆ. ಕೃಷಿ ಕ್ಷೇತ್ರದಲ್ಲಿ ಆರೋಗ್ಯಕರ ಬೆಳವಣಿಗೆ ದಾಖಲಿಸಿದ್ದು, ರಫ್ತು ಸರಕುಗಳಲ್ಲಿ ಸಕ್ಕರೆ, ಸೋಯಾಬೀನ್ ಎಣ್ಣೆ ಮತ್ತು ತರಕಾರಿಗಳ ಕೊಬ್ಬಿನಾಂಶ ಹಾಗೂ ತೈಲಗಳು ಮಹತ್ವದ ಕೊಡುಗೆ ನೀಡಿವೆ. ಮಾವಿನಹಣ್ಣು, ಮೀನಿನ ಎಣ್ಣೆ, ಚಹಾ ಮತ್ತು ತಾಜಾ ದ್ರಾಕ್ಷಿಗಳ ರಫ್ತು ಕುಸಿದಿದೆ.
ಇದೊಂದು ಸಕಾರಾತ್ಮಕ ಸಂಕೇತವಾಗಿದೆ. ದೇಶೀಯ ರಫ್ತುದಾರರ ಹೆಚ್ಚುತ್ತಿರುವ ಸ್ಪರ್ಧಾತ್ಮಕತೆಯನ್ನು ಪ್ರತಿಬಿಂಬಿಸುತ್ತದೆ ಎಂದು ಫೆಡರೇಷನ್ ಆಫ್ ಇಂಡಿಯನ್ ಎಕ್ಸ್‌ಪೋರ್ಟ್ ಆರ್ಗನೈಸೇಷನ್ಸ್ (ಎಫ್‌ಐಇಒ) ಅಧ್ಯಕ್ಷ ಎಸ್ ಕೆ ಸರಫ್ ಹೇಳಿದ್ದಾರೆ.
ಇದನ್ನೂ ಓದಿ: ಫಾಸ್ಟ್ಟ್ಯಾಗ್ನಲ್ಲಿ ತಪ್ಪಾಗಿ ಕಡಿತಗೊಂಡ ಹಣ ಮರುಪಾವತಿಸಿದ ಪೇಟಿಎಂ ಬ್ಯಾಂಕ್
ವಿದ್ಯುತ್ ಯಂತ್ರೋಪಕರಣ ಮತ್ತು ಉಪಕರಣಗಳು, ಬಾಯ್ಲರ್, ಯಂತ್ರೋಪಕರಣಗಳು ಮತ್ತು ಯಾಂತ್ರಿಕ ವಸ್ತುಗಳು, ಪ್ಲಾಸ್ಟಿಕ್, ಕಬ್ಬಿಣ ಮತ್ತು ಉಕ್ಕು, ಪೀಠೋಪಕರಣ, ರಸಗೊಬ್ಬರ, ವಾಹನ ಭಾಗಗಳು ಮತ್ತು ಪರಿಕರಗಳು, ಆಟಿಕೆ ಮತ್ತು ಕ್ರೀಡಾ ಉಪಕರಣಗಳು, ಅಜೈವಿಕ ರಾಸಾಯನಿಕಗಳು ಮತ್ತು ಸೆರಾಮಿಕ್ ಉತ್ಪನ್ನಗಳು ಸೇರಿ ಇತರೆ ಸರಕುಗಳ ಆಮದಿನಲ್ಲಿ ಕುಸಿತ ಕಂಡಿವೆ.