ದೆಹಲಿ: ಹುಂಡೈ ಮೋಟಾರ್ ಇಂಡಿಯಾ ಕಂಪನಿ i20 ಎನ್ಲೈನ್ ಕಾರನ್ನು ಅನಾವರಣಗೊಳಿಸಿದೆ. ಈ ಹೊಸ ಹ್ಯುಂಡೈ ಐ-20 ಎನ್ ಲೈನ್ ಕಾರು ಪರ್ಫಾಮೆನ್ಸ್ ಕಾರು ಆಗಿರುವುದರಿಂದ ಹೆಚ್ಚು ಸ್ಪೋರ್ಟಿ ಲುಕ್ ಹೊಂದಿದೆ.
ಸ್ಪೋರ್ಟಿ ಲುಕ್ ನೀಡಲು ಮೋಟಾರ್‌ಸ್ಪೋರ್ಟ್ಸ್‌ನಿಂದ ಸ್ಪೂರ್ತಿ ಪಡೆದು ಕಾರಿನ ಹೊರಾಂಗಣ ಮತ್ತು ಒಳಾಂಗಣದಲ್ಲಿ ಬಹಳಷ್ಟು ಬದಲಾವಣೆಗಳನ್ನು ಮಾಡಲಾಗಿದೆ ಎಂದು ಕಂಪನಿ ತಿಳಿಸಿದೆ. ಈ ಪರ್ಫಾಮೆನ್ಸ್ ಕಾರು ಹೊಸ ಫ್ರಂಟ್ ಮತ್ತು ರೇರ್ ಬಂಪರ್, ಸೈಡ್ ಸ್ಕರ್ಟ್ ಗಳು ಮತ್ತು ವಿಭಿನ್ನ ವಿನ್ಯಾಸದ ಅಲಾಯ್ ವ್ಹೀಲ್ಗಳನ್ನು ಹೊಂದಿದೆ.
ಇನ್ನು ಕ್ರೋಪ್ ಟ್ರಿಪ್ಡ್ ಡ್ಯುಯಲ್ ಎಕ್ಸಾಸ್ಟ್ ಅನ್ನು ಹೊಂದಿದೆ. ಸ್ಟ್ಯಾಂಡರ್ಡ್ ಐ-20 ಮಾದರಿಗೆ ಹೋಲಿಸಿದರೆ ಐ-20 ಎನ್ ಲೈನ್ ಕಾರು ಹೆಚ್ಚು ಅಗ್ರೇಸಿವ್ ಲುಕ್ ಅನ್ನು ಹೊಂದಿದೆ. ಈ ಐ20 ಎನ್ ಲೈನ್ ಮಾದರಿಯು ಕಾರು ಪ್ರಿಯರನ್ನು ಸೆಳೆಯುಂತಹ ಆಕರ್ಷಕ ಲುಕ್ ಒಳಗೊಂಡಿದೆ.
ಈ ಹೊಸ ಹ್ಯುಂಡೈ ಎನ್ ಲೈನ್ ಕಾರಿನ ಇಂಟಿರಿಯರ್ ಹೆಚ್ಚಾಗಿ ಸ್ಟ್ಯಾಂಡರ್ಡ್ ಮಾದರಿಗೆ ಹೋಲುತ್ತದೆ. ಈ ಕಾರಿನ ಒಳಭಾಗದಲ್ಲಿ ಹೊಸ ಸ್ಟೀರಿಂಗ್ ವ್ಹೀಲ್, ಮೆಟಲ್ ಪೆಡಲ್ಗಳು, ಲೆದರ್ ಗೇರ್ ನಾಬ್ ಸೇರಿದಂತೆ ಕೆಲವು ಬದಲಾವಣೆಗಳನ್ನು ಹೊಂದಿವೆ. ಕಾರಿನ ಒಳಭಾಗದ ಹಲವು ಕಡೆಗಳಲ್ಲಿ ಎನ್ ಬ್ಯಾಡ್ಜ್ ಹೊಂದಿರುತ್ತದೆ.
ಈ ಪರ್ಫಾರ್ಮೆನ್ಸ್ ಕಾರಿನಲ್ಲಿ ಆಫಲ್ ಕಾರ್ ಪ್ಲೇ ಮತ್ತು ಆಂಡ್ರಾಯ್ಡ್ ಆಟೋ ಕನೆಕ್ಟಿವಿಟಿ ಹೊಂದಿರುವ ಟಚ್ ಸ್ಕ್ರೀನ್ ಇನ್ಫೋಟೈನ್ ಮೆಂಟ್ ಸಿಸ್ಟಂ ಅನ್ನು ಹೊಂದಿರುತ್ತದೆ. ಇದರೊಂದಿಗೆ ಫುಲ್ ಡಿಜಿಟಲ್ ಇನ್ಸ್ಟ್ರೂಮೆಂಟ್ ಕ್ಲಸ್ಟರ್ ಅನ್ನು ಕೂಡ ಹೊಂದಿರಲಿದೆ.
₹ 25 ಸಾವಿರಕ್ಕೆ ಬುಕ್ಕಿಂಗ್
ಐ-20 ಎನ್ ಲೈನ್ ಕಾರು 1.2 ಎನ್ ಪೆಟ್ರೋಲ್ ಎಂಜಿನ್ ಮತ್ತು 1.0 ಎಲ್ ಟರ್ಬೋಚಾರ್ಜ್ಡ್ ಪೆಟ್ರೋಲ್ ಎಂಜಿನ್ ಅನ್ನು ನೀಡಬಹುದು.. ಈ ಎಂಜಿನ್ 118 ಬಿಹೆಚ್‍ಪಿ ಪವರ್ ಮತು 200 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ ಹೊಂದಿರುತ್ತದೆ.
ಐ- 20 ಎನ್ ಲೈನ್ ಕಾರು 1 ಲೀಟರ್ ಪೆಟ್ರೋಲ್ ಟರ್ಬೊ ಜಿಐಡಿ ಎಂಜಿನ್ ಹೊಂದಿದ್ದು, 6 ಸ್ಪೀಡ್ ಇಂಟಲಿಜೆಂಟ್ ಮ್ಯಾನುಯಲ್ ಟ್ರಾನ್ಸ್‌ಮಿಷನ್ (ಐಎಂಟಿ) ಮತ್ತು 7 ಸ್ಪೀಡ್ ಡಿಸಿಟಿ ಟ್ರಾನ್ಸ್‌ಮಿಷನ್ ಆಯ್ಕೆಗಳನ್ನು ಒಳಗೊಂಡಿದೆ. ಆನ್‌ಲೈನ್‌ನಲ್ಲಿ ‘ಹುಂಡೈ ಕ್ಲಿಕ್ ಟು ಬೈ’ ಮೂಲಕ ಅಥವಾ ಹುಂಡೈ ಸಿಗ್ನೆಚರ್ ಡೀಲರ್‌ಶಿಪ್‌ಗಳ ಮೂಲಕ ₹ 25 ಸಾವಿರಕ್ಕೆ ಬುಕ್ಕಿಂಗ್ ಮಾಡಬಹುದಾಗಿದೆ ಎಂದು ಕಂಪನಿ ತಿಳಿಸಿದೆ.
ಈ ಕಾರು ನಾಲ್ಕು ಡಿಸ್ಕ್ ಬ್ರೇಕ್‌ಗಳು, 50 ಕನೆಕ್ಟಿವಿಟಿ ಫೀಚರ್‌ಗಳು, ಸನ್ ರೂಫ್, ಆರು ಏರ್‌ಬ್ಯಾಗ್‌ಗಳನ್ನು ಹೊಂದಿರಲಿದೆ. ಇನ್ನು ಈ ಪರ್ಫಾಮೆನ್ಸ್ ಕಾರಿನಲ್ಲಿ ಇಂಟರ್ಕೂಲರ್, ಹುಂಡೈನ ಹೊಸ ಸಿವಿವಿಡಿ (ನಿರಂತರವಾಗಿ ವೇರಿಯಬಲ್ ವಾಲ್ವ್ ಅವಧಿ) ತಂತ್ರಜ್ಞಾನ ಮತ್ತು 350 ಬಾರ್ ಫ್ಯೂಯಲ್ ಇಂಜೆಕ್ಷನ್ ಸಿಸ್ಟಂನೊಂದಿಗೆ ಮೋಟರ್ ಅನ್ನು ಹೆಚ್ಚಿಸಲಾಗಿದೆ. ಸಿವಿವಿಡಿ ತಂತ್ರಜ್ಞಾನವು ಎಂಜಿನ್‌ನ ಕಾರ್ಯಕ್ಷಮತೆ ಮತ್ತು ಇಂಧನ ದಕ್ಷತೆಯನ್ನು ಸುಧಾರಿಸುತ್ತದೆ. ಈಗಾಗಲೇ ಯುರೋಪ್ ಮಾರುಕಟ್ಟೆಯಲ್ಲಿ ಐ20 ಎನ್ ಲೈನ್ ಅನ್ನು ಪರಿಚಯಿಸಲಾಗಿದೆ.
"ಕಳೆದ 2 - 3 ವರ್ಷಗಳಿಂದ, ಹ್ಯುಂಡೈ ಹೆಚ್ಚು ಹೆಚ್ಚು ಯುವ ಗ್ರಾಹಕರ ಅವಶ್ಯತೆ ಪೂರೈಸಲು ಪ್ರಯತ್ನಿಸುತ್ತಿದೆ. ಆದ್ದರಿಂದ ಈ ಶ್ರೇಣಿಯು ನಮ್ಮ ಬ್ರಾಂಡ್ ಮೌಲ್ಯವನ್ನು ಮತ್ತಷ್ಟು ಹೆಚ್ಚಿಸುತ್ತದೆ ಎಂದು ನಾವು ಭಾವಿಸುತ್ತೇವೆ. ನಾವು ಹೆಚ್ಚಿನ ಉತ್ಪನ್ನಗಳನ್ನು ಹೊಂದಲು ಯೋಜಿಸುತ್ತಿರುವುದರಿಂದ, ಇದು ನಮಗೆ ವಿಶಿಷ್ಟವಾದ ಗ್ರಾಹಕರನ್ನು ನೀಡುತ್ತದೆ, ಇದು ಕಂಪನಿ ಮುಂದುವರೆಯಲು ತುಂಬಾ ಉಪಯುಕ್ತವಾಗಿದೆ" ಎಂದು ಕಂಪನಿ ತನ್ನ ಹೇಳಿಕೆಯಲ್ಲಿ ತಿಳಿಸಿದೆ.
ಸೋಮವಾರದಿಂದಲೇ ಬುಕ್ಕಿಂಗ್ ಆರಂಭ
ಕಂಪನಿಯು ಸೋಮವಾರದಿಂದ ಐ -20 ಎನ್ಲೈನ್ ಬುಕ್ಕಿಂಗ್ ಆರಂಭಿಸಿದ್ದು, ಸೆಪ್ಟೆಂಬರ್ ಮೊದಲ ವಾರದಲ್ಲಿ ಬೆಲೆ ಘೋಷಣೆಯಾಗುವ ನಿರೀಕ್ಷೆಯಿದೆ. ಈ ಮಾದರಿಯನ್ನು ದೇಶದ 97 ನಗರಗಳಲ್ಲಿರುವ 188 ಹುಂಡೈ ಸಿಗ್ನೆಚರ್ ಮಳಿಗೆಗಳ ಮೂಲಕ ಮಾರಾಟ ಮಾಡಲಾಗುವುದು. ಹುಂಡೈ ಪ್ರಸ್ತುತ ಎನ್ ಲೈನ್ ಅನ್ನು ಯುರೋಪ್, ದಕ್ಷಿಣ ಕೊರಿಯಾ, ಯುಎಸ್ ಮತ್ತು ರಷ್ಯಾ ಮುಂತಾದ ವಿವಿಧ ಕಡೆ ಮಾರಾಟ ಮಾಡಲಿದೆ.
ಇದರ ಮೊದಲ N- ಬ್ರಾಂಡ್ ವಾಹನ ಐ30 ಎನ್ ಆಗಿತ್ತು, ಇದು 2017 ರಲ್ಲಿ ಮಾರುಕಟ್ಟೆ ಪ್ರವೇಶಿಸಿತು.