ಹೈದರಾಬಾದ್: ಜೀವ ವಿಮಾ ಪಾಲಿಸಿಯು ಅಪಘಾತ, ಗಂಭೀರ ಅನಾರೋಗ್ಯ ಅಥವಾ ಮಾರಣಾಂತಿಕ ಕಾಯಿಲೆ ಮತ್ತು ವೃದ್ಧಾಪ್ಯದ ವೇಳೆ ಆರ್ಥಿಕ ರಕ್ಷಣೆ ನೀಡುವ ಸಾಧನವಾಗಿದೆ. ಕಾಲಕಾಲಕ್ಕೆ ಪ್ರೀಮಿಯಂಗಳನ್ನು ಪಾವತಿಸುವವರೆಗೆ ಇದು ನಿರ್ದಿಷ್ಟ ಅವಧಿಗೆ ಜೀವನಕ್ಕೆ ರಕ್ಷಣೆಯನ್ನು ನೀಡುವ ಸೌಲಭ್ಯವಾಗಿದೆ.
ವಿಮಾದಾರನು ತನ್ನ ಮರಣಾನಂತರ ಅವರ ಕುಟುಂಬ, ಪ್ರೀತಿಪಾತ್ರರಿಗೆ ಹಣಕಾಸಿನ ರಕ್ಷಣೆ ನೀಡುವುದನ್ನು ಈ ಜೀವ ವಿಮಾ ಪಾಲಿಸಿ ಖಚಿತಪಡಿಸುತ್ತದೆ. ಹೀಗೆ ನಿಮ್ಮ ಅಗತ್ಯಗಳಿಗೆ ಸೂಕ್ತವಾದ ವಿಮೆಯನ್ನು ನೀವು ಹೊಂದುವ ಮೂಲಕ ಜೀವನ ಭದ್ರತೆಯನ್ನು ಪಡೆದುಕೊಳ್ಳಬಹುದಾಗಿದೆ.
ನೀವು ವಿಮೆ ಮಾಡಿಸಿದರೆ ಮಾತ್ರ ಸಾಲದು, ಅದಕ್ಕೆ ಪೂರಕವಾಗಿ ನೀಡಲಾದ ದಾಖಲೆಗಳು ವಿಶ್ವಾಸಾರ್ಹ ಮತ್ತು ನಿಖರವಾಗಿರಬೇಕು. ಆಗ ಮಾತ್ರ ವಿಮೆಯ ಸೌಲಭ್ಯವನ್ನು ಕಾಲಾವಧಿಯಲ್ಲಿ ಪಡೆದುಕೊಳ್ಳಲು ಸಾಧ್ಯ. ಹಾಗಾದರೆ, ವಿಮೆಯನ್ನು ಮಾಡಿಸುವಾಗ ನಾವು ಏನು ಮಾಡಬೇಕು, ಯಾವೆಲ್ಲಾ ಪೂರಕ ದಾಖಲೆಗಳನ್ನು ಒದಗಿಸಬೇಕು ಮತ್ತು ಪಾಲಿಸಿಯನ್ನು ಹೇಗೆ ಕ್ಲೈಮ್ ಮಾಡಿಕೊಳ್ಳಬಹುದು ಎಂಬುದನ್ನು ತಿಳಿಯೋಣ..
ವಿಮಾ ಪಾಲಿಸಿಯನ್ನು ಸರಿಯಾಗಿ ಅರ್ಥ ಮಾಡಿಕೊಳ್ಳಿ
ವಿಮಾ ಪಾಲಿಸಿಯಲ್ಲಿ ಹಲವಾರು ವಿಧಗಳಿವೆ. ಅವುಗಳು ನಮ್ಮ ಅನುಕೂಲಕ್ಕೆ ತಕ್ಕಂತೆ ಮಾಡಿಸಿಕೊಳ್ಳಬಹುದು. ನಾವು ತೆಗೆದುಕೊಳ್ಳುವ ಪಾಲಿಸಿ ಪ್ರಕಾರ ಯಾವುದು? ಪರಿಹಾರ ಯಾವಾಗ ಸಿಗುತ್ತದೆ ? ಎಂಬ ಅಂಶಗಳನ್ನು ಮೊದಲು ಸರಿಯಾಗಿ ಅರಿತಿರಬೇಕು. ವಿಮಾ ಹಣವನ್ನು ಕ್ಲೈಮ್ ಮಾಡಲು, ನಿಮ್ಮ ಬ್ಯಾಂಕ್ ಖಾತೆಯ ವಿವರಗಳನ್ನು ಕಾಲಕಾಲಕ್ಕೆ ವಿಮಾ ಕಂಪನಿಗೆ ತಿಳಿಸಬೇಕು. ಎಲ್ಲಾ ಪ್ರೀಮಿಯಂಗಳನ್ನು ಸಮಯಕ್ಕೆ ಸರಿಯಾಗಿ ಪಾವತಿಸಬೇಕು. ಪಾಲಿಸಿಗೆ ನೀವು ನೀಡಿದ ಮಾಹಿತಿ ಸುಳ್ಳಾಗಿರಬಾರದು. ಆಗ ಮಾತ್ರ ಪಾಲಿಸಿ ಕ್ಲೈಮ್ಗೆ ಯಾವುದೇ ಅಡ್ಡಿಯಾಗದು.
ವಿಮಾ ಪಾಲಿಸಿಯಲ್ಲಿ ಪಾರದರ್ಶಕತೆ ಇರಲಿ
ಪಾಲಿಸಿಯನ್ನು ಮಾಡಿಸುವ ಮೊದಲ ಉದ್ದೇಶವೆಂದರೆ ನಮಗೆ ಹಣದ ಅವಶ್ಯಕತೆ ಇದ್ದಾಗ ಪರಿಹಾರ ಪಡೆಯುವುದು. ಆದ್ದರಿಂದ, ಪಾಲಿಸಿಯನ್ನು ತೆಗೆದುಕೊಳ್ಳುವಾಗ ವಿಮಾ ಕಂಪನಿಗೆ ಒದಗಿಸಲಾದ ಪ್ರತಿಯೊಂದು ಮಾಹಿತಿಯೂ ನಿಖರ ಮತ್ತು ಸ್ಪಷ್ಟವಾಗಿರಲೇಬೇಕು. ಆಗ ಮಾತ್ರ ಪಾಲಿಸಿಯ ಅವಧಿ ಮುಗಿದ ನಂತರ ಅಥವಾ ಪಾಲಿಸಿದಾರನ ಅಕಾಲಿಕ ಮರಣದ ಸಂದರ್ಭದಲ್ಲಿ ಸುಲಭವಾಗಿ ಪರಿಹಾರವನ್ನು ಪಡೆದುಕೊಳ್ಳಬಹುದು.
ಪಾಲಿಸಿದಾರರು ಒದಗಿಸಿದ ಮಾಹಿತಿಯ ಆಧಾರದ ಮೇಲೆ ಪಾಲಿಸಿಯನ್ನು ನೀಡಲಾಗಿರುತ್ತದೆ. ವಿಮಾ ಕಂಪನಿಯು ವಿಮಾದಾರನ ಆದಾಯ, ವಯಸ್ಸು ಮತ್ತು ಇತರ ಅಂಶಗಳನ್ನು ಗಣನೆಗೆ ತೆಗೆದುಕೊಂಡು ಪಾಲಿಸಿ ನೀಡಿರುತ್ತದೆ. ಒಂದು ವೇಳೆ ಪಾಲಿಸಿದಾರರು ತಪ್ಪು ವಿವರಗಳನ್ನು ನೀಡಿದಾಗ ಕ್ಲೈಮ್ನ ಸಂದರ್ಭದಲ್ಲಿ ಮಾಹಿತಿ ಸರಿಹೊಂದದೇ ನೀವು ಪರಿಹಾರವನ್ನು ಕಳೆದುಕೊಳ್ಳಬೇಕಾದೀತು.
ಆರೋಗ್ಯದ ಮಾಹಿತಿ ಕರಾರುವಕ್ಕಾಗಿರಲಿ
ವಿಮಾ ಕಂಪನಿಗಳು ನಿಮಗೆ ಪಾಲಿಸಿ ನೀಡುವಾಗ ವಿಮಾದಾರನ ಆರೋಗ್ಯವನ್ನು ಗಂಭೀರವಾಗಿ ಪರಿಗಣಿತವಾಗಿರುತ್ತದೆ. ಆದ್ದರಿಂದ, ಪಾಲಿಸಿಯನ್ನು ತೆಗೆದುಕೊಳ್ಳುವಾಗ ನಮಗಿರುವ ಯಾವುದೇ ಕಾಯಿಲೆಗಳನ್ನು ಮುಚ್ಚಿಡದೇ ಅದರಲ್ಲಿ ನಮೂದು ಮಾಡಬೇಕು. ಈ ವೇಳೆ ಕೆಲ ಗಂಭೀರ ಕಾಯಿಲೆಗಳಿಗೆ ಕಂಪನಿ ಪಾಲಿಸಿ ನೀಡಲು ನಿರಾಕರಿಸುತ್ತದೆ. ಆದಾಗ್ಯೂ ವಿವರಗಳನ್ನು ಮುಚ್ಚಿಟ್ಟು ಪಾಲಿಸಿ ತೆಗೆದುಕೊಂಡಾಗ, ನಂತರ ಅದು ಗೊತ್ತಾದಾಗ ಪಾಲಿಸಿಯನ್ನು ರದ್ದು ಮಾಡುವ ಹಕ್ಕು ವಿಮಾ ಕಂಪನಿಗೆ ಇರುತ್ತದೆ.
ಅದರಲ್ಲೂ ಧೂಮಪಾನಿಗಳು ಚಟದ ಬಗ್ಗೆ ಮಾಹಿತಿ ನೀಡಿರಲೇಬೇಕು. ಧೂಮಪಾನಿಗಳಿಗೆ ಹೆಚ್ಚಿನ ಪ್ರೀಮಿಯಂ ಕಟ್ಟಬೇಕಾಗುತ್ತದೆ. ಆದರೆ, ಭವಿಷ್ಯದಲ್ಲಿ ಪಾಲಿಸಿ ಕ್ಲೈಮ್ ವೇಳೆ ತೊಂದರೆ ಉಂಟಾಗದು.
ನೀವೀಗಾಗಲೇ ಪಾಲಿಸಿದಾರರಾಗಿದ್ದೀರಾ?
ನೀವು ಈಗಾಗಲೇ ಯಾವುದೇ ಕಂಪನಿಯ ಪಾಲಿಸಿದಾರರಾಗಿದ್ದರೆ ಅದನ್ನು ನೂತನವಾಗಿ ಮಾಡಿಸುವ ಪಾಲಿಸಿ ಕಂಪನಿಗೆ ಈ ಬಗ್ಗೆ ಮಾಹಿತಿ ನೀಡಬೇಕು. ಇಲ್ಲವಾದಲ್ಲಿ ಅದು ಪಾಲಿಸಿ ಕ್ಲೈಮ್ ವೇಳೆ ಆದಾಯದ ವ್ಯತ್ಯಾಸದಿಂದಾಗಿ ಪಾಲಿಸಿಯ ಹಣ ನಿಮಗೆ ಸಿಗದೇ ಇರುವ ಸಾಧ್ಯತೆಗಳಿರುತ್ತವೆ.
ಕಾಲಕಾಲಕ್ಕೆ KYC ವಿವರಗಳನ್ನು ನವೀಕರಿಸಿ
ಪಾಲಿಸಿ ತೆಗೆದುಕೊಂಡ ನಂತರ ಸಂಪರ್ಕ ಸಂಖ್ಯೆ, ಇ-ಮೇಲ್ ಮತ್ತು ಮನೆಯ ವಿಳಾಸ ಬದಲಾದರೆ, ಅಂತಹ ವಿವರಗಳನ್ನು ವಿಮಾ ಕಂಪನಿಗೆ ಆಗಾಗ ಮಾಹಿತಿ ನವೀಕರಿಸಿ. ಹಳೆಯ ದಾಖಲೆಗಳು, ಹೊಸ ದಾಖಲೆಗಳಿಗೆ ಸರಿ ಹೊಂದದಿದ್ದಾಗ ನೀವು ನಿಮ್ಮ ಪಾಲಿಸಿಯನ್ನು ಕಳೆದುಕೊಳ್ಳಬೇಕಾಗುವ ಸಾಧ್ಯತೆ ಹೆಚ್ಚಿರುತ್ತದೆ. ಪಾಲಿಸಿಯನ್ನು ಆನ್‌ಲೈನ್‌ನಲ್ಲಿ ತೆಗೆದುಕೊಂಡರೂ ಸಹ ತಮ್ಮ ಬಳಿ ಹಾರ್ಡ್ ಕಾಪಿಗಳನ್ನು ಇಟ್ಟುಕೊಳ್ಳಬೇಕು ಮತ್ತು ಪಾವತಿಸಿದ ಪ್ರೀಮಿಯಂನ ರಸೀದಿಗಳನ್ನು ಸಂರಕ್ಷಿಸಿಟ್ಟುಕೊಳ್ಳಿ.
ನಾಮಿನಿದಾರರ ವಿವರ ಕಡ್ಡಾಯ ನಮೂದಿಸಿ
ಅನಿರೀಕ್ಷಿತ ಸಂದರ್ಭಗಳಲ್ಲಿ ಯಾರು ಪಾಲಿಸಿಯನ್ನು ಕ್ಲೈಮ್ ಮಾಡಿಕೊಳ್ಳಬೇಕು ಎಂಬುದನ್ನು ಪಾಲಿಸಿ ತೆಗೆದುಕೊಳ್ಳುವಾಗ ನಾಮಿನಿದಾರರ ಹೆಸರು, ವಿವರವನ್ನು ಕಡ್ಡಾಯವಾಗಿ ನಮೂದಿಸಿರಿ. ಹಲವರು ನಾಮಿನಿದಾರರ ವಿವರಗಳನ್ನು ನಮೂದಿಸುವಲ್ಲಿ ನಿರ್ಲಕ್ಷ್ಯ ವಹಿಸುತ್ತಾರೆ. ಇದನ್ನು ನೀವು ಮಾಡಬೇಡಿ. ನಿಮ್ಮ ಪಾಲಿಸಿಯಲ್ಲಿ ನಾಮಿನಿಯ ಹೆಸರು ನಮೂದಿಸಿದ್ದೀರಾ ಎಂಬುದನ್ನು ಖಚಿತಪಡಿಸಿಕೊಳ್ಳಿ. ಆಧಾರ್ ಮತ್ತು ಪ್ಯಾನ್ ಕಾರ್ಡ್‌ನಲ್ಲಿರುವ ಹೆಸರು, ಹುಟ್ಟಿದ ದಿನಾಂಕದ ವಿವರಗಳಿಗೆ ಇದು ಹೊಂದಿಕೆಯಾಗಬೇಕು.
ಒಂದು ವೇಳೆ ಬ್ಯಾಂಕ್ ಖಾತೆ ವಿವರಗಳು ಬದಲಾದಾಗ, ಆ ವಿವರಗಳನ್ನು ವಿಮಾ ಕಂಪನಿಗೆ ಮಾಹಿತಿ ನೀಡಿ. ಕ್ಲೈಮ್ ಮಾಡುವ ಸಮಯದಲ್ಲಿ, ವಿಮಾ ಕಂಪನಿಗಳು ನಾಮಿನಿಗೆ ಕೆಲವು ಪ್ರಶ್ನೆಗಳನ್ನು ಮತ್ತು ಗುರುತಿನ ಪರಿಶೀಲನೆಯ ವಿವರಗಳನ್ನು ಕೇಳುತ್ತವೆ. ಇದು ಸರಿಯಾದ ವ್ಯಕ್ತಿಗೆ ಪರಿಹಾರದ ಹಣ ಸಿಗಬೇಕು ಎಂಬುದು ಇದರ ಹಿಂದಿನ ಉದ್ದೇಶವಾಗಿರುತ್ತದೆ.