ನವದೆಹಲಿ: ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ಮಂಡಳಿಯು ಜೂನ್ 12ರಂದು ತನ್ನ ಸಭೆ ನಡೆಸಲಿದ್ದು, ಅಂದು ಕೋವಿಡ್ -19 ಸಂಬಂಧಿತ ಅಗತ್ಯ ವಸ್ತುಗಳ ತೆರಿಗೆ ವಿಧಿಸುವ ಅಥವಾ ವಿನಾಯಿತಿಯ ಕುರಿತು ತೀರ್ಮಾನ ತೆಗೆದುಕೊಳ್ಳುವ ಸಾಧ್ಯತೆಯಿದೆ. ಮಂಗಳವಾರ ಸಚಿವರು ತಂಡ ಸಲ್ಲಿಸಿದ ಶಿಫಾರಸು ಅನುಸರಿಸಿ ಕೋವಿಡ್ ಸಂಬಂಧಿತ ವಸ್ತುಗಳ ಮೇಲಿನ ವಿನಾಯಿತಿ ಮತ್ತು ರಿಯಾಯತಿಯ ಬಗ್ಗೆಯೇ ಸಭೆಯಲ್ಲಿ ಚರ್ಚಿಸುವ ನಿರೀಕ್ಷೆಯಿದೆ.
ಈ ಕುರಿತಾಗಿ ಸಚಿವರ ತಂಡದ ಶಿಫಾರಸನ್ನು ಇನ್ನೂ ಸಾರ್ವಜನಿಕವಾಗಿ ಪ್ರಕಟಿಸಿಲ್ಲ. ಆದರೆ, ಲಸಿಕೆಗೆ ತೆರಿಗೆ ವಿಧಿಸುವ ವಿಷಯವನ್ನು ಮತ್ತೆ ಮಂಡಳಿಗೆ ಕಳುಹಿಸಲಾಗಿದೆ ಎಂದು ತಿಳಿದುಬಂದಿದೆ. ವಾಣಿಜ್ಯ ಆಮದು ಮತ್ತು ವೈದ್ಯಕೀಯ ಆಮ್ಲಜನಕ, ಆಮ್ಲಜನಕ ಸಾಂದ್ರಕಗಳು, ಆಕ್ಸಿಮೀಟರ್‌ಗಳು ಮತ್ತು ಪರೀಕ್ಷಾ ಕಿಟ್‌ಗಳು ಸೇರಿದಂತೆ ಕೋವಿಡ್ ಔಷಧಿಗಳು ಮತ್ತು ವಸ್ತುಗಳ ದೇಶೀಯ ಪೂರೈಕೆಯ ಮೇಲಿನ ಜಿಎಸ್‌ಟಿ ದರವನ್ನು ತಾತ್ಕಾಲಿಕವಾಗಿ ಶೇ 5ಕ್ಕೆ ಇಳಿಸಲು ಸೂಚಿಸಿದೆ.
ಇದನ್ನೂ ಓದಿ: ಇದೇ ಮೊದಲು: ಬಿಟ್‌ಕಾಯಿನ್ ಕಾನೂನು ಬದ್ಧಗೊಳಿಸಿದ ಎಲ್ ಸಾಲ್ವಡಾರ್
ಕೇಂದ್ರವು ಈಗ ದೇಶದಲ್ಲಿ ಉತ್ಪತ್ತಿಯಾಗುವ ಎಲ್ಲಾ ಲಸಿಕೆಗಳಲ್ಲಿ ಶೇ 75ರಷ್ಟು ಸಂಗ್ರಹಿಸಿ ರಾಜ್ಯಗಳಿಗೆ ಉಚಿತವಾಗಿ ನೀಡಲಿದೆ. ಖಾಸಗಿಗೆ ಶೇ 25ರಷ್ಟು ಲಸಿಕೆಗಳನ್ನು ಖರೀದಿಸಲು ಶೇ 5ರಷ್ಟು ಜಿಎಸ್‌ಟಿ ಪಾವತಿಸಬೇಕಾಗುತ್ತದೆ. ಲಸಿಕೆಗಳ ಮೇಲಿನ ಜಿಎಸ್‌ಟಿ ದರ ಮುಂಬರುವ ಸಭೆ ಆದ್ಯತೆಯ ಚರ್ಚೆಯಾಗಿದೆ.
ಗುಜರಾತ್ ಡೆಪ್ಯುಟಿ ಸಿಎಂ ನಿತಿನ್ಭಾಯ್ ಪಟೇಲ್, ಮಹಾರಾಷ್ಟ್ರ ಡೆಪ್ಯುಟಿ ಸಿಎಂ ಅಜಿತ್ ಪವಾರ್, ಗೋವಾ ಸಾರಿಗೆ ಸಚಿವ ಮೌವಿನ್ ಗೋಡಿನ್ಹೋ, ಕೇರಳ ಹಣಕಾಸು ಸಚಿವ ಕೆ.ಎನ್.ಬಾಲಗೋಪಾಲ್, ಒಡಿಶಾ ಹಣಕಾಸು ಸಚಿವ ನಿರಂಜನ್ ಪೂಜಾರಿ, ತೆಲಂಗಾಣ ಹಣಕಾಸು ಸಚಿವ ಟಿ.ಹರೀಶ್ ರಾವ್ ಮತ್ತು ಉತ್ತರ ಪ್ರದೇಶ ಹಣಕಾಸು ಸಚಿವ ಸುರೇಶ್ ಕುಮಾರ್ ಖನ್ನಾ ಸಭೆಯಲ್ಲಿ ಭಾಗವಹಿಸುವರು.