ನವದೆಹಲಿ: ಸರಕು ಮತ್ತು ಸೇವಾ ತೆರಿಗೆ (ಜಿಎಸ್ಟಿ) ಮಂಡಳಿಯ 41ನೇ ಸಭೆಯು ಆಗಸ್ಟ್ 27ರಂದು ವಿಡಿಯೋ ಕಾನ್ಫರೆನ್ಸ್ ಮೂಲಕ ನಡೆಯಲಿದೆ.
ಈ ವೇಳೆ ರಾಜ್ಯಗಳ ಪರಿಹಾರ ಪಾವತಿ ಮತ್ತು ಆದಾಯದ ಕೊರತೆ ಪೂರೈಸಲು ಮಾರುಕಟ್ಟೆ ಸಾಲ ಪಡೆಯುವ ಕಾನೂನುಬದ್ಧತೆಯ ಬಗ್ಗೆ ಅಟಾರ್ನಿ ಜನರಲ್ ಅವರ ಅಭಿಪ್ರಾಯ ಪಡೆಯುವ ಬಗ್ಗೆ ಚರ್ಚಿಸುವ ಸಾಧ್ಯತೆಯಿದೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.
ಮಂಡಳಿಯ ಪೂರ್ಣ ಪ್ರಮಾಣದ ಸಭೆಯು ಸೆಪ್ಟೆಂಬರ್ 19ರಂದು ನಡೆಯಲಿದೆ. ಅದರ ಕಾರ್ಯಸೂಚಿಯ ಕುರಿತು ಸರಿಯಾದ ಸಮಯದಲ್ಲಿ ನಿರ್ಧರಿಸಲಾಗುವುದು ಎಂದು ಹೇಳಿದ್ದಾರೆ.
ಸರ್ಕಾರದ ಮುಖ್ಯ ಕಾನೂನು ಅಧಿಕಾರಿ ಅಟಾರ್ನಿ ಜನರಲ್ ಬೊಕ್ಕಸದಿಂದ ರಾಜ್ಯಗಳ ಜಿಎಸ್ಟಿ ಆದಾಯದಲ್ಲಿ ಯಾವುದೇ ಕೊರತೆ ನೀಗಿಸಲು ಕೇಂದ್ರಕ್ಕೆ ಯಾವುದೇ ಶಾಸನಬದ್ಧ ಹೊಣೆಗಾರಿಕೆ ಇಲ್ಲ ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಎಜಿ ಅಭಿಪ್ರಾಯ ಆಧರಿಸಿ ಆದಾಯದ ಕೊರತೆ ಪೂರೈಸಲು ರಾಜ್ಯಗಳು ಈಗ ಮಾರುಕಟ್ಟೆ ಸಾಲಗಳತ್ತ ಎದುರು ನೋಡಬೇಕಾಗಬಹುದು. ಜಿಎಸ್ಟಿ ಕೌನ್ಸಿಲ್ ಅಂತಿಮ ನಿರ್ಧಾರ ತೆಗೆದುಕೊಳ್ಳುತ್ತದೆ.