ನವದೆಹಲಿ: ಉಕ್ರೇನ್ ಮೇಲೆ ರಷ್ಯಾ ಮಿಲಿಟರಿ ಯುದ್ಧ ಘೋಷಣೆಯು ಮಾರುಕಟ್ಟೆಗಳ ಮೇಲೆ ಭಾರಿ ಪ್ರಭಾವ ಬೀರಿದ್ದು, ಇದೀಗ 10 ಗ್ರಾಂ ಚಿನ್ನದ ದರದಲ್ಲಿ ಏಕಾಏಕಿ 1,400 ರೂಪಾಯಿಯಷ್ಟು ಹೆಚ್ಚಳ ಕಂಡಿದೆ. ಇದು ವರ್ಷದಲ್ಲೇ ಅತ್ಯಧಿಕ ಏರಿಕೆಯಾಗಿದೆ.
ಚಿನಿವಾರ ಪೇಟೆಯಲ್ಲಿ 10 ಗ್ರಾಂ ಚಿನ್ನ 1400 ರೂಪಾಯಿ ಹೆಚ್ಚಳ ಕಂಡು 51,750 ಗರಿಷ್ಠ ಮಟ್ಟ ದಾಖಲಿಸಿದೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ 1925 ಡಾಲರ್ನಷ್ಟಿದ್ದ ಚಿನ್ನವು 1950 ಡಾಲರ್ಗೆ ತಲುಪಿದೆ. ಇದು 13 ತಿಂಗಳ ಗರಿಷ್ಠ ಏರಿಕೆಯಾಗಿದೆ. ಮುಂದೆ ಇದು 2000 ಡಾಲರ್ವರೆಗೂ ಹೆಚ್ಚುವ ಸಾಧ್ಯತೆ ಇದೆ ಎಂದು ಮಾರುಕಟ್ಟೆ ವಿಶ್ಲೇಷಕರು ಅಂದಾಜಿಸಿದ್ದಾರೆ.
ಜಾಗತಿಕ ಹಣದುಬ್ಬರ ಆತಂಕ: ಉಕ್ರೇನ್ ಮೇಲೆ ರಷ್ಯಾದ ದಾಳಿಯಿಂದಾಗಿ ಜಾಗತಿಕ ಹಣದುಬ್ಬರದ ಆತಂಕ ಉಂಟಾಗಿದೆ. ಪೆಟ್ರೋಲ್ ಕಚ್ಚಾತೈಲದ ಬೆಲೆ ಈಗಾಗಲೇ 100 ಡಾಲರ್ಗೆ(ಪ್ರತಿ ಬ್ಯಾರಲ್) ಏರಿಕೆಯಾಗಿದೆ. ಇದು ವಿಶ್ವದ ಎಲ್ಲಾ ರಾಷ್ಟ್ರಗಳಲ್ಲಿ ಆರ್ಥಿಕ ಮುಗ್ಗಟ್ಟು ಹೆಚ್ಚಲು ಕಾರಣವಾಗಲಿದೆ ಎಂದು ಹೇಳಲಾಗಿದೆ.
ರೂಪಾಯಿ ವಿರುದ್ಧ ಡಾಲರ್ ಸ್ಥಿತಿ: ತೈಲ ದರ, ಚಿನ್ನದ ಬೆಲೆ ಏರಿಕೆ ಮಧ್ಯೆ ಡಾಲರ್ ಎದುರು ರೂಪಾಯಿ ದರ ಏರಿಕೆಯಾಗುವ ಸಾಧ್ಯತೆ ಇದೆ. ಸದ್ಯಕ್ಕೆ ರೂಪಾಯಿ ಬೆಲೆ ಸ್ಥಿರವಾಗಿದೆ.
ಇದನ್ನೂ ಓದಿ: ರಷ್ಯಾ ಆಕ್ರಮಣ ಶುರು: ಉಕ್ರೇನ್ ರಾಜಧಾನಿ, ನಗರಗಳಲ್ಲಿ ಭಾರಿ ಪ್ರಮಾಣದ ಸ್ಫೋಟ- ವಿಡಿಯೋ