ನವದೆಹಲಿ: 2021-22ನೇ ಸಾಲಿನ ಕೇಂದ್ರ ಬಜೆಟ್ ಅನ್ನು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮಂಡಿಸಿದ್ದು, ಈ ವರ್ಷ ನಡೆಯಲಿರುವ ಜನಗಣತಿಗೆ ವಿಶೇಷ ಅನುದಾನವನ್ನು ಬಿಡುಗಡೆ ಮಾಡಿದ್ದಾರೆ.
ಮುಂಬರುವ ಜನಗಣತಿಯು ಭಾರತದ ಮೊದಲ ಡಿಜಿಟಲ್ ಗಣತಿಯಾಗಿರಲಿದ್ದು, ಇದರ ವೆಚ್ಚಕ್ಕಾಗಿ 3,768 ಕೋಟಿ ರೂ. ಮೀಸಲಿಡಲಾಗಿದೆ ಎಂದು ಸೀತಾರಾಮನ್ ಘೋಷಿಸಿದ್ದಾರೆ.
ಕೋವಿಡ್-19ನಿಂದ ಸಂಭವಿಸಿರುವ ನಾನಾ ಅಡಚಣೆಯಿಂದಾಗಿ ಮೊದಲ ಹಂತದ ಜನಗಣತಿ ಚಟುವಟಿಕೆಗಳು ಮತ್ತು ಪ್ರಚಾರ ಅಭಿಯಾನವನ್ನು ಮುಂದೂಡಿಕೆ ಮಾಡಲಾಗಿದೆ. ಕೊರೊನಾದಿಂದಾಗಿ ಈ ಬಾರಿ ಜನಗಣತಿಯ ಅನೇಕ ಪ್ರಕ್ರಿಯೆಗಳು ಡಿಜಿಟಲ್ ಆಗಿ ನಡೆಯಲಿವೆ. ಈ ಹಿಂದೆ ಕೂಡ ಕೇಂದ್ರ ಗೃಹ ಸಚಿವಾಲಯ 2021ರ ಜನಗಣತಿಯಲ್ಲಿ ಮಾಹಿತಿ ಸಂಗ್ರಹಣೆಗಾಗಿ ಮೊಬೈಲ್ ಆ್ಯಪ್ಗಳನ್ನು ಬಳಸಲಾಗುವುದು ಎಂದು ತಿಳಿಸಿತ್ತು.
ಇದನ್ನೂ ಓದಿ: ಆರೋಗ್ಯವೇ ಭಾಗ್ಯ: ಬಜೆಟ್‌ನಲ್ಲಿ 64 ಸಾವಿರ ಕೋಟಿ ರೂ. ಅನುದಾನ
ಜನಗಣತಿಯು ಅತಿದೊಡ್ಡ ಆಡಳಿತ ಮತ್ತು ಸಂಖ್ಯಾಶಾಸ್ತ್ರೀಯ ಕಾರ್ಯಗಳಲ್ಲಿ ಒಂದಾಗಿದೆ. ದೇಶಾದ್ಯಂತ ಪ್ರತಿ ಮನೆಗೆ ಸುಮಾರು 30 ಲಕ್ಷ ಅಧಿಕಾರಿಗಳು ಭೇಟಿ ನೀಡುತ್ತಾರೆ. ಜನಗಣತಿ ಮತ್ತು ರಾಷ್ಟ್ರೀಯ ಜನಸಂಖ್ಯಾ ನೋಂದಣಿ (ಎನ್‌ಪಿಆರ್) ಯನ್ನು ಜಂಟಿಯಾಗಿ ತೆಗೆದುಕೊಂಡು ಹೋಗಲು ಸರ್ಕಾರ ನಿರ್ಧರಿಸಿತ್ತು. ಆದರೆ, ಪ್ರತಿಪಕ್ಷಗಳು ಇದನ್ನು ತೀವ್ರವಾಗಿ ಟೀಕಿಸಿದ್ದವು.