ಬೆಂಗಳೂರು: ರಾಜ್ಯದಲ್ಲಿ ಸಂಭವಿಸಿದ ಪ್ರವಾಹದಿಂದ ಅಂದಾಜು 32 ಸಾವಿರ ಕೋಟಿ ರೂ. ನಷ್ಟ ಉಂಟಾಗಿದೆ ಎಂದು ಸರ್ಕಾರದ ಮುಖ್ಯ ಕಾರ್ಯದರ್ಶಿ ವಿಜಯ್ ಭಾಸ್ಕರ್ ಹೇಳಿದರು.
ಎಫ್ಕೆಸಿಸಿಐನಲ್ಲಿ ನಡೆದ ಸಭೆಯಲ್ಲಿ ಮಾತನಾಡಿದ ಅವರು, ರಾಜ್ಯದ ಹಲವು ಜಿಲ್ಲೆಗಳಲ್ಲಿ ಮಳೆ ಹಾಗೂ ಪ್ರವಾಹ ಸಂಬಂಧಿತ ಹಾನಿಯಿಂದ ಅಂದಾಜು 32,000 ಕೋಟಿ ರೂ. ನಷ್ಟವಾಗಿದೆ. ಹಲವು ಹಂತದ ಪರಿಶೀಲನೆಗಳು ಮುಕ್ತಾಯವಾಗಿದ್ದು, ಕೊನೆಯ ಹಂತವೊಂದೇ ಉಳಿದಿದೆ. ಪ್ರವಾಹ ಪೀಡಿತ ಪ್ರತಿ ಸಂತ್ರಸ್ತ ಕುಟುಂಬಗಳಿಗೆ ತಲಾ 10,000 ರೂ. ಪರಿಹಾರ ಧನ ನೀಡಲಾಗುತ್ತಿದೆ. ಕಲ್ಯಾಣ ಮಂಟಪ ಹಾಗೂ ಸಮುದಾಯ ಭವನಗಳನ್ನು ನೆರೆ ಸಂತ್ರಸ್ತರಿಗಾಗಿ ಉಪಯೋಗಿಸಲಾಗುತ್ತಿದೆ ಎಂದರು.
ಪರಿಹಾರ ಕೇಂದ್ರಗಳಿಗೆ ಭೇಟಿ ನೀಡಿದ ಸಂದರ್ಭದಲ್ಲಿ ಕುಟುಂಬಗಳಿಗೆ 10 ಕೆಜಿ ಅಕ್ಕಿ, 1 ಕೆಜಿ ಬೆಲ್ಲ, ಅಡುಗೆ ಎಣ್ಣೆ, ಸಕ್ಕರೆ, ಉಪ್ಪು ಹಾಗೂ 5 ಲೀಟರ್ ಸೀಮೆಎಣ್ಣೆ ಒಳಗೊಂಡ ಆಹಾರ ಕಿಟ್ ವಿತರಿಸುತ್ತಿದ್ದೇವೆ ಎಂದು ವಿಜಯ್ ಭಾಸ್ಕರ್ ತಿಳಿಸಿದರು.
ಕೇಂದ್ರದ ತಂಡ 2 ದಿನಗಳ ಪ್ರವಾಸ ಮುಗಿಸಿ ಇಂದು ಕೊಡಗಿನಲ್ಲಿ ಪರಿಶೀಲನೆ ನಡೆಸಿದೆ. ರಾಜ್ಯ ಸರ್ಕಾರ ನಷ್ಟವಾಗಿರುವ ಎಲ್ಲ ಅಂಕಿ-ಅಂಶಗಳನ್ನು ಒಗ್ಗೂಡಿಸಿ ಕೇಂದ್ರಕ್ಕೆ ಸಲ್ಲಿಸಬೇಕಿತ್ತು. ಆದರೆ, ಮನವಿ ಪತ್ರ ಕಳಿಸುವ ಮುನ್ನವೇ ಕೇಂದ್ರ ರಾಜ್ಯದ ಪರಿಸ್ಥಿತಿಯನ್ನು ಅರಿಯಲು ಅಧಿಕಾರಿಗಳ ತಂಡ ಕಳುಹಿಸಿದೆ. ಬರಕ್ಕೆ ನೀಡಿದ ಹಣವನ್ನು ಪ್ರವಾಹಕ್ಕೆ ಬಳಸಲು ಸಾಧ್ಯವಿಲ್ಲ ಎಂದರು.