ಬೆಂಗಳೂರು: ದೇಶದಲ್ಲಿ ಈ ಹಿಂದೆ ಇಂತಹ ಬಿಕ್ಕಟ್ಟುಗಳು ತಲೆದೂರಿದ್ದಾಗ ಯಾವ ಹಣಕಾಸು ಸಚಿವರು ದೇಶದ ಜನತೆಯ ಮುಂದೆ ಬಂದು ಹೇಳಿಕೆ ನೀಡಿರಲಿಲ್ಲ. ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಆ ಕೆಲಸ ಮಾಡಿದ್ದಾರೆ. ಜೊತೆಗೆ ಲಕ್ಷ್ಮಿ ದೇವಿಯಂತೆ ಅವರು ಆರ್ಥಿಕ ಬಿಕ್ಕಟ್ಟುಗಳನ್ನು ನಿವಾರಿಸಲಿದ್ದಾರೆ ಎಂದು ಬೆಂಗಳೂರು ಎಫ್ಕೆಸಿಸಿಐ ಅಧ್ಯಕ್ಷ ಸಿ. ಆರ್. ಜನಾರ್ದನ್ ಅಭಿಪ್ರಾಯಪಟ್ಟರು.
ಈ ಟೀವಿ ಭಾರತ್ ಜೊತೆಗೆ ಮಾತನಾಡಿದ ಅವರು, ದೇಶದಲ್ಲಿ ಆರ್ಥಿಕ ಬಿಕ್ಕಟ್ಟು ಸೃಷ್ಟಿ ಆಗಿರುವುದನ್ನು ಒಪ್ಪಿಕೊಂಡ ಹಣಕಾಸು ಸಚಿವರು, ಆರ್ಥಿಕ ಸುಧಾರಣೆಗೆ ಕ್ರಮ ತೆಗೆದುಕೊಳ್ಳುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಆಟೊಮೊಬೈಲ್, ಎಂಎಸ್ಎಂಇ ವಲಯ ಸೇರಿದಂತೆ ಇತರೆ ವಲಯಗಳಲ್ಲಿ ಸುಧಾರಣೆ ತರುವುದಾಗಿ ಹೇಳಿದ್ದಾರೆ. ಇದನ್ನು ಉದ್ಯಮ ವಲಯ ಸ್ವಾಗತಿಸುತ್ತದೆ ಎಂದರು.
ಜಿಎಸ್ಟಿಯಲ್ಲಿ ಸುಧಾರಣಾ ಕ್ರಮಗಳನ್ನು ತರುವುದಾಗಿ ಭರವಸೆ ನೀಡಿದ ಅವರು, ಮುಂದಿನ 30 ದಿನಗಳಲ್ಲಿ ಜಿಎಸ್ಟಿಯಡಿ ಬಾಕಿ ಉಳಿಸಿಕೊಂಡ ಹಣ ಹಿಂತಿರುಗಿಸುವುದಾಗಿ ಆಶ್ವಾಸನೆ ನೀಡಿದ್ದಾರೆ. ಇದರಿಂದ ಎಂಎಸ್ಎಂಇ ಕ್ಷೇತ್ರಕ್ಕೆ ಲಾಭವಾಗಲಿದೆ. ವಿಶ್ವದ ಆರ್ಥಿಕ ವ್ಯವಸ್ಥೆ ಹಳಿ ತಪ್ಪಿದ್ದು, ಭಾರತದ ಮಟ್ಟಿಗೆ ಅಷ್ಟೊಂದು ಬಾಧಿಸಿಲ್ಲ. ಬೇರೆ ರಾಷ್ಟ್ರಗಳಿಗೆ ಹೊಲಿಸಿದರೆ ನಮ್ಮ ಆರ್ಥಿಕತೆ ಸದೃಢವಾಗಿದೆ ಎಂದು ಹೇಳಿದರು.
'ಮುಂದಿನ ದಿನಗಳಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಎಂಜಿನ್ ವಾಹನಗಳು ಇರುವುದಿಲ್ಲ' ಎಂದು ಬಜೆಟ್ನಲ್ಲಿನ ವಿತ್ತ ಸಚಿವರು ಹೇಳಿದ್ದನ್ನು ಜನರು ತಪ್ಪಾಗಿ ಅರ್ಥೈಹಿಸಿಕೊಂಡಿದ್ದಾರೆ. ಹೀಗಾಗಿ, ವಾಹನಗಳ ಖರೀದಿಗೆ ಜನ ಹಿಂದೇಟು ಹಾಕುತ್ತಿದ್ದಾರೆ. ಇದನ್ನು ಮನಗಂಡ ಸೀತಾರಾಮನ್ ಅವರು, 2020ರ ಮಾರ್ಚ್ ತಿಂಗಳವರೆಗೂ ನೋಂದಣಿ ಆಗುವ ವಾಹನಗಳು ನಿಗದಿ ಅವಧಿ ಮುಗಿಯುವವರೆಗು ಮಾನ್ಯತೆ ಪಡೆಯಲಿವೆ ಎಂದು ಸ್ಪಷ್ಟನೆ ನೀಡಿದ್ದಾರೆ. ಇದು ಆಟೊಮೊಬೈಲ್ ವಲಯದ ವಾಹನಗಳ ಮಾರಾಟಕ್ಕೆ ಪುನಶ್ಚೇತ ಸಿಗಬಹುದು ಎಂದು ಜನಾರ್ದನ್ ಅಭಿಪ್ರಾಯಪಟ್ಟರು.