ನವದೆಹಲಿ: ವಿದ್ಯುತ್ ಚಾಲಿತ ವಾಹನಗಳ ಬಳಕೆಗೆ ಉತ್ತೇಜನ ನೀಡಲು ಕೇಂದ್ರ ಸರ್ಕಾರ ಹೊಸ ಮಾರ್ಗಸೂಚಿಗಳನ್ನು ಪ್ರಕಟಿಸಿದ್ದು, ವಿದ್ಯುತ್ ಚಾಲಿತ ವಾಹನಗಳ ಮಾಲೀಕರು ತಮ್ಮ ನಿವಾಸ ಅಥವಾ ಕಚೇರಿಗಳಲ್ಲಿ ಅಸ್ಥಿತ್ವದಲ್ಲಿರುವ ವಿದ್ಯುತ್ ಸಂಪರ್ಕಗಳನ್ನೇ ಬಳಸಿಕೊಂಡು ತಮ್ಮ ವಾಹನಗಳನ್ನು ಚಾರ್ಚ್ ಮಾಡಿಕೊಳ್ಳಬಹುದಾಗಿದೆ.
ವಿದ್ಯುತ್ ಚಾಲಿತ ವಾಹನಗಳಿಗಾಗಿ ಪರಿಷ್ಕೃತ ಮಾರ್ಗಸೂಚಿಗಳು ಮತ್ತು ಮಾನದಂಡಗಳನ್ನು ಕೇಂದ್ರ ಸರ್ಕಾರ ಶುಕ್ರವಾರ ಪ್ರಕಟಿಸಿದ್ದು, ಈ ಮೂಲಕ ಕೆಲವೊಂದು ನಿಯಮಗಳಲ್ಲಿ ಸಡಿಲಿಕೆ ತಂದು ವಿದ್ಯುತ್ ಚಾಲಿತ ವಾಹನಗಳನ್ನು ಬಳಸಲು ಪ್ರೋತ್ಸಾಹ ನೀಡಿದೆ.
ಇಂಧನ ಸಚಿವಾಲಯದ ಪ್ರಕಾರ, ಈ ಹೊಸ ಮಾರ್ಗಸೂಚಿಗಳು ಸುರಕ್ಷಿತ, ವಿಶ್ವಾಸಾರ್ಹ, ಕೈಗೆಟುಕುವ ದರದಲ್ಲಿ ಚಾರ್ಜ್ ಮಾಡಿಕೊಳ್ಳಲು ಅವಕಾಶ ನೀಡಲಿದ್ದು, ಈ ಮೂಲಕ ಭಾರತದಲ್ಲಿ ಎಲೆಕ್ಟ್ರಾನಿಕ್ ವಾಹನಗಳ ವಲಯ ತೀವ್ರಗತಿಯ ಬೆಳವಣಿಗೆಗೆ ಅನುವು ಮಾಡಿಕೊಡಲಿದೆ.
ಇಂಧನ ಭದ್ರತೆಯನ್ನು ಈ ಮಾರ್ಗಸೂಚಿಗಳು ಉತ್ತೇಜಿಸುವುದು ಮಾತ್ರವಲ್ಲದೇ, ವಿದ್ಯುತ್ಚಾಲಿತ ವಾಹನಗಳ ಮೂಲಕ ದೇಶದಲ್ಲಿ ಮಾಲಿನ್ಯ ಕಡಿಮೆ ಮಾಡಲು ಸಹಕಾರಿಯಾಗುತ್ತದೆ ಎಂದು ವಿದ್ಯುತ್ ಸಚಿವಾಲಯ ಸ್ಪಷ್ಟನೆ ನೀಡಿದೆ.
ಮಾಲೀಕರಿಗೆ ವಿದ್ಯುತ್ ಚಾಲಿತ ವಾಹನಗಳಿಗೆ ತಮ್ಮ ಬಳಿಯ ಸಂಪರ್ಕಗಳಲ್ಲೇ ಚಾರ್ಜ್ ಮಾಡಿಕೊಳ್ಳಲು ಅವಕಾಶ ನೀಡಿರುವ ಕೇಂದ್ರ ಸರ್ಕಾರ, ಪಬ್ಲಿಕ್ ಚಾರ್ಜಿಂಗ್ ಸ್ಟೇಷನ್ಗಳಿಗೆ (ಪಿಸಿಎಸ್) ಕೆಲವೊಂದು ನಿಬಂಧನೆಗಳನ್ನು ಕೂಡಾ ಹೊರಡಿಸಿದೆ.
ಯಾವುದೇ ವ್ಯಕ್ತಿ ಅಥವಾ ಘಟಕವು ಯಾವುದೇ ಲೈಸೆನ್ಸ್ ಅಗತ್ಯವಿಲ್ಲದೇ ಸಾರ್ವಜನಿಕ ಚಾರ್ಜಿಂಗ್ ಸ್ಟೇಷನ್ ಸ್ಥಾಪನೆ ಮಾಡಬಹುದಾಗಿದೆ ಎಂಬ ಮಹತ್ವದ ನಿರ್ಧಾರವನ್ನು ಕೇಂದ್ರ ಸರ್ಕಾರ ತೆಗೆದುಕೊಂಡಿದೆ. ಇದರ ಜೊತೆಗೆ ತಾಂತ್ರಿಕತೆ, ಸುರಕ್ಷತೆ ಮತ್ತು ಕಾರ್ಯಕ್ಷಮತೆ ವಿಚಾರದಲ್ಲಿ ಕೆಲವೊಂದು ಮಾನದಂಡಗಳನ್ನು ನಿಗದಿ ಮಾಡಲಾಗಿದೆ.
ಇದನ್ನೂ ಓದಿ: ಹೆಚ್ಒಜಿ ತಂತ್ರಜ್ಞಾನ: ಇಂಧನ ಉಳಿತಾಯದತ್ತ ನೈರುತ್ಯ ರೈಲ್ವೆ ಇಲಾಖೆ ಹೆಜ್ಜೆ