ನವದೆಹಲಿ: ಕೊರೊನಾ ವೈರಸ್ ಹರಡಲು ಪ್ರಾರಂಭವಾದ ಬಳಿಕ ಆರೋಗ್ಯ ವಿಮೆ ಮಾಡಿಸುವವರ ಸಂಖ್ಯೆ ಶೇ.30ರಷ್ಟು ಏರಿಕೆಯಾಗಿದೆ ಎಂದು ಆನ್ಲೈನ್ ವಿಮಾ ಸಂಗ್ರಾಹಕ ಪಾಲಿಸಿ ಬಜಾರ್ ತಿಳಿಸಿದೆ.
ಈ ಬಗ್ಗೆ ಪ್ರತಿಕ್ರಿಯಿಸಿರುವ ಪಾಲಿಸಿ ಬಜಾರ್ ಡಾಟ್ ಕಾಮ್ ಮುಖ್ಯಸ್ಥ ಅಮಿತ್ ಛಬ್ರಾ, ವಿಮಾ ಕ್ಷೇತ್ರದಲ್ಲಿ ಇದೊಂದು ಮಹತ್ವದ ಬದಲಾವಣೆಯಾಗಿದೆ. ಈ ಹಿಂದೆ ಆರೋಗ್ಯ ವಿಮೆ ಮಾಡಿಸಿಕೊಳ್ಳಲು ಮುಂದಾಗದ ಜನರೆಲ್ಲ ಈಗ ಅದರ ಮಹತ್ವ ಅರಿತುಕೊಂಡಿದ್ದಾರೆ. ಹೀಗಾಗಿ ಆರೋಗ್ಯ ವಿಮೆ ಖರೀದಿದಾರರ ಸಂಖ್ಯೆ ಶೇ. 30 ಮತ್ತು ಜೀವ ವಿಮಾ ಖರೀದಿದಾರರ ಸಂಖ್ಯೆ ಶೇ.20ರಷ್ಟು ಏರಿಕೆಯಾಗಿದೆ ಎಂದು ಹೇಳಿದ್ದಾರೆ.
ವಿಮೆ ಖರೀದಿದಾರರಲ್ಲಿ ಹೆಚ್ಚಿನವರು ಯುವ ಜನರು ಮತ್ತು ಮೊದಲ ಬಾರಿಗೆ ವಿಮೆ ಮಾಡಿಸುವವರಾಗಿದ್ದಾರೆ. ಈ ಹಿಂದೆ ತಮಗೆ ಏನು ಆಗುವುದಿಲ್ಲ ಮತ್ತು ಆಮೇಲೆ ಮಾಡಿದರೆ ಆಯ್ತು ಎಂದು ಇವರೆಲ್ಲ ಭಾವಿಸುತ್ತಿದ್ದರು. ಆದರೆ, ಕೊರೊನಾ ಸೋಂಕು ಬಂದ ಮೇಲೆ ಎಲ್ಲರೂ ವಿಮೆಯ ಅಗತ್ಯತೆಯನ್ನು ಅರಿತುಕೊಂಡಿದ್ದಾರೆ ಎಂದಿದ್ದಾರೆ.
ಈ ಹಿಂದೆ ಜನ ಆರ್ಥಿಕ ಹೊಡೆತ ಬೀಳುತ್ತೆ ಎಂದು ವಿಮಾ ಪಾಲಿಸಿ ಮಾಡಿಸುತ್ತಿರಲಿಲ್ಲ. ಆದರೆ, ಈಗ ಎಲ್ಲರೂ ವಿಮಾ ಮಾಡಿಸಬೇಕೆಂದು ಬಯಸುತ್ತಿದ್ದಾರೆ. ಇದರಿಂದ ಜನರ ಆರೋಗ್ಯ, ಜೀವನ, ಆರ್ಥಿಕತೆ ಎಲ್ಲವೂ ಸುರಕ್ಷಿತವಾಗಿದೆ ಎಂದು ತಿಳಿಸಿದ್ದಾರೆ.