ನವದೆಹಲಿ : ಐಟಿ ಉದ್ಯಮಕ್ಕೆ ಆತಂಕಕಾರಿಯಾದ ಸೈಬರ್ ದಾಳಿಯ ಬಗ್ಗೆ ಸೈಬರ್ ತಜ್ಞರು ಎಚ್ಚರಿಕೆಯ ವರದಿಯೊಂದನ್ನು ಬಹಿರಂಗಪಡಿಸಿದ್ದಾರೆ.
ಕೋವಿಡ್-19 ಸಾಂಕ್ರಾಮಿಕ ರೋಗ ಹಬ್ಬಿದ ಇತ್ತೀಚಿನ ತಿಂಗಳಲ್ಲಿ ಸೈಬರ್ ಅಪರಾಧಗಳ ಸಂಖ್ಯೆ ಹೆಚ್ಚಾಗಿದೆ. ದಕ್ಷಿಣ ಭಾರತದ ಚೆನ್ನೈ ಮತ್ತು ಬೆಂಗಳೂರು ನಗರಗಳನ್ನು ಗುರಿಯಾಗಿಸಿ ಸೈಬರ್ ಚೋರರು ಅಟ್ಯಾಕ್ ಮಾಡುತ್ತಿದ್ದಾರೆ ಎಂದು ತಿಳಿಸಿದ್ದಾರೆ. ಈ ಬಗ್ಗೆ ಈಟಿವಿ ಭಾರತ ಜತೆ ಮಾತನಾಡಿದ ದೆಹಲಿ ಮೂಲದ ಸೈಬರ್ ತಜ್ಞ ಮುಖೇಶ್ ಚೌಧರಿ ಅವರು, ಕೊರೊನಾ ಸಾಂಕ್ರಾಮಿಕ ಬಿಕ್ಕಟ್ಟಿನ ಸಂದರ್ಭದಲ್ಲಿ ಸೈಬರ್ ಅಪರಾಧಿಗಳು ತಮ್ಮ ದಾಳಿಯ ವೈಖರಿ ಬದಲಾಯಿಸಿದ್ದಾರೆ ಎಂದರು.
ಸಾಂಕ್ರಾಮಿಕ ರೋಗ ಮತ್ತು ಲಾಕ್ಡೌನ್ ಕಾರಣದಿಂದಾಗಿ ಇಂಟರ್ನೆಟ್ ಬಳಕೆಯ ಪ್ರಮಾಣ ಹೆಚ್ಚಾಗಿದೆ. ಸೈಬರ್ ವಂಚಕರು ಇದನ್ನೇ ಅಸ್ತ್ರವಾಗಿ ಮಾಡಿಕೊಂಡು ಬಳಕೆದಾರರಿಗೆ ನಾನಾ ಶೈಲಿಯಲ್ಲಿ ಆಮಿಷವೊಡ್ಡುವ ಸಂದೇಶ, ಲಿಂಕ್ ಕಳುಹಿಸುತ್ತಿದ್ದಾರೆ. ಈಗಿನ ವ್ಯವಸ್ಥೆಯನ್ನು ತಮ್ಮ ದುಷ್ಕೃತ್ಯಗಳಿಗೆ ವೇದಿಕೆಯಾಗಿ ಬಳಸಿಕೊಳ್ಳುತ್ತಿದ್ದಾರೆ. ವಿಶೇಷವಾಗಿ ಮದ್ಯ ಮಾರಾಟ, ಕೋವಿಡ್ -19 ಆರೈಕೆ ಮತ್ತು ಇತರೆ ನಕಲಿ ಆ್ಯಪ್‌ಗಳನ್ನು ಹಬ್ಬಿಸುತ್ತಿದ್ದಾರೆ ಎಂದರು.
ಸೈಬರ್ ಚೋರರು ಉದ್ಯಮಗಳು ಮತ್ತು ಸಾಫ್ಟ್‌ವೇರ್‌ಗಳನ್ನು ಸಹ ಗುರಿಯಾಗಿಸಿಕೊಂಡಿದ್ದಾರೆ. 2020ರ ಜನವರಿ ಮತ್ತು ಮಾರ್ಚ್‌ನಲ್ಲಿ ಶೇ.42ರಷ್ಟು ಸೈಬರ್ ದಾಳಿಯ ಮೂಲಕ ಚೆನ್ನೈ ಅಗ್ರಸ್ಥಾನದಲ್ಲಿದೆ. ಈ ಬಳಿಕ ಬೆಂಗಳೂರು ಶೇ.38ರಷ್ಟು ದಾಳಿಯೊಂದಿಗೆ 2ನೇ ಸ್ಥಾನದಲ್ಲಿದೆ. ಹೈದರಾಬಾದ್ ಮತ್ತು ಕೋಲ್ಕತಾ ಶೇ.35ರಷ್ಟು ದಾಳಿಗೆ ಒಳಗಾಗಿವೆ ಎಂದು ಖಾಸಗಿ ಸೈಬರ್ ಭದ್ರತಾ ಸಂಸ್ಥೆ ಕೆ7 ಕಂಪ್ಯೂಟಿಂಗ್ ಬಿಡುಗಡೆ ಮಾಡಿದ ವರದಿಯಲ್ಲಿದೆ.
ಸೈಬರ್ ದಾಳಿಕೋರರು ಬಹುತೇಕ ಮೈಕ್ರೋಸಾಫ್ಟ್‌ನ ವಿಂಡೋಸ್ ಎಕ್ಸ್‌ಪಿ ಮತ್ತು ವಿಂಡೋಸ್ 7 ಓಎಸ್‌ನ ಗುರಿಯಾಗಿಸಿಕೊಂಡಿದ್ದಾರೆ. ಮೈಕ್ರೋಸಾಫ್ಟ್ ಈ ಎರಡು ಓಸ್‌ಗಳ ನವೀಕರಣ ಮತ್ತು ಪ್ಯಾಚ್ ನಿಲ್ಲಿಸಿದ್ದನ್ನು ಗಮನಿಸಿಯೇ ಇವುಗಳನ್ನು ಟಾರ್ಗೆಟ್ ಮಾಡಿದ್ದಾರೆ ಎಂದು ಕೆ 7 ಕಂಪ್ಯೂಟಿಂಗ್ ಸಿಇಒ ಕೇಶವರಧನ್ ಹೇಳಿದರು. ಕರ್ವ್‌ಬಾಲ್, ರಿಮೋಟ್ ಕೋಡ್ ಎಕ್ಸಿಕ್ಯೂಷನ್, ಕೋವಿಡ್ -19 ಟ್ರೆಂಡ್‌ಗಳನ್ನು ಆಧರಿಸಿದ ಫಿಶಿಂಗ್ ದಾಳಿಗಳು ಮತ್ತು ಸೇವೆ ನಿರಾಕರಣೆಯಂತಹ (ಡಾಸ್) ಸೈಬರ್ ಅಪರಾಧಿಗಳು ಸಾಮಾನ್ಯ ದಾಳಿಗಳಾಗಿವೆ ಎಂದು ವರದಿಯಲ್ಲಿ ಉಲ್ಲೇಖವಾಗಿದೆ.
ಸಂಕೀರ್ಣ ವೈರಸ್‌ಗಳಾದ ಟ್ರೋಜನ್ ಮತ್ತು ರ್ಯಾನ್ ಸಮ್‌ವೇರ್ ವೈರಸ್ಗೆ ಉದ್ಯಮ ಸಂಸ್ಥೆಗಳು ಈಡಾಗುತ್ತಿವೆ. ನಕಲಿ ಆ್ಯಪ್, ಕೋವಿಡ್-19 ಅಪ್ಲಿಕೇಷನ್‌ಗಳು ಮತ್ತು ಇತರೆ ಆ್ಯಪ್ ಡೌನ್‌ಲೋಡ್ ಮಾಡುವಾಗ ದಾಳಿ ನಡೆಯುವ ಸಂಭವವಿದೆ ಎಂದು ವರದಿಯಲ್ಲಿ ಹೇಳಲಾಗಿದೆ. ಚೆನ್ನೈ ಮತ್ತು ಬೆಂಗಳೂರು ದೇಶದ ಪ್ರಮುಖ ಐಟಿ ಕೇಂದ್ರಗಳಾಗಿರುವುದರಿಂದ ಸೈಬರ್ ವಂಚಕರು ಸಹಜವಾಗಿ ಈ ನಗರಗಳತ್ತ ದೃಷ್ಟಿ ನೆಟ್ಟಿದ್ದಾರೆ. ಈ ಬಗ್ಗೆ ಎಚ್ಚರಿಕೆಯಿಂದರಬೇಕು ಎನ್ನುತ್ತಾರೆ ಮುಖೇಶ್ ಚೌಧರಿ.