ನವದೆಹಲಿ: ಇದೇ ಡಿ.31 ರೊಳಗೆ ದೇಶಾದ್ಯಂತ ಫೇಸ್ಲೆಸ್ ಕಸ್ಟಮ್ಸ್ ಅಸೆಸ್ಮೆಂಟ್ ವ್ಯವಸ್ಥೆಯನ್ನು ಜಾರಿಗೊಳಿಸಲಾಗುವುದು. ಆರಂಭದಲ್ಲಿ ಚೆನ್ನೈ, ಬೆಂಗಳೂರುಗಳಲ್ಲಿ ಆರಂಭಿಸಿ ನಂತರ ಹಂತ ಹಂತವಾಗಿ ದೇಶಾದ್ಯಂತ ಈ ವ್ಯವಸ್ಥೆಯನ್ನು ಜಾರಿಗೊಳಿಸಲಾಗುವುದು ಎಂದು ಸಿಬಿಐಸಿ ಹೇಳಿದೆ.
ಕೇಂದ್ರೀಯ ಪರೋಕ್ಷ ತೆರಿಗೆ ಮತ್ತು ಕಸ್ಟಮ್ಸ್ ಮಂಡಳಿಯು (Central Board of Indirect Taxes and Customs -CBIC) ಈ ಕುರಿತಾದ ಸುತ್ತೋಲೆ ಹೊರಡಿಸಿದ್ದು, ಫೇಸ್ಲೆಸ್ ಅಸೆಸ್ಮೆಂಟ್ ವ್ಯವಸ್ಥೆ (ಸಾಮಾನ್ಯವಾಗಿ ಅನಾಮಧೇಯ ಅಥವಾ ವರ್ಚುವಲ್ ಅಸೆಸ್ಮೆಂಟ್ ಎಂದು ಕರೆಯಲಾಗುತ್ತದೆ) ಈ ಹಿಂದಿನ ಕಾರ್ಯವೈಖರಿಗಿಂತ ಸಂಪೂರ್ಣ ಭಿನ್ನವಾಗಿರುವುದರಿಂದ ಇದನ್ನು ಹಂತ ಹಂತವಾಗಿ ಜಾರಿಗೊಳಿಸಲಾಗುವುದು. ವ್ಯಾಪಾರ ಕ್ಷೇತ್ರ ಹಾಗೂ ಸಂಬಂಧಿಸಿದ ಯಾರಿಗೂ ತೊಂದರೆಯಾಗದಂತೆ ಹೊಸ ವ್ಯವಸ್ಥೆ ಜಾರಿ ಮಾಡಲಾಗುವುದು ಎಂದು ತಿಳಿಸಿದೆ.
ವರ್ಚುವಲ್ ಅಸೆಸ್ಮೆಂಟ್ನ ಮೊದಲ ಹಂತವು ಜೂ.8 ರಿಂದ ಬೆಂಗಳೂರು ಮತ್ತು ಚೆನ್ನೈಗಳಲ್ಲಿ ಆರಂಭವಾಗಲಿದ್ದು, 1975 ರ ಕಸ್ಟಮ್ಸ್ ಟ್ಯಾರಿಫ್ ಕಾಯ್ದೆಯ ಚಾಪ್ಟರ್ 84, 85 ರಲ್ಲಿ ಉಲ್ಲೇಖಿಸಲಾಗಿರುವ ವಸ್ತುಗಳ ಆಮದಿನ ಮೇಲೆ ಅನ್ವಯವಾಗಲಿದೆ. ಬರುವ ಡಿ.31 ರೊಳಗೆ ಹೊಸ ವ್ಯವಸ್ಥೆ ಇಡೀ ದೇಶಾದ್ಯಂತ ಜಾರಿಯಾಗಲಿದೆ. ಹೊಸ ವ್ಯವಸ್ಥೆಯ ಕುರಿತಾಗಿ ಸಿಬಿಐಸಿ ಈಗಾಗಲೇ ಚೆನ್ನೈ, ಬೆಂಗಳೂರು, ದೆಹಲಿ, ಗುಜರಾತ್ ಮತ್ತು ವಿಶಾಖಪಟ್ಟಣಗಳಲ್ಲಿ ಪ್ರಾಯೋಗಿಕ ಪ್ರಕ್ರಿಯೆಗಳನ್ನು ನಡೆಸಿದೆ.