ಕೈರೋ (ಈಜಿಪ್ಟ್): ಸೂಯೆಜ್ ಕಾಲುವೆಯ ಮರಳಿನ ರಾಶಿಯಲ್ಲಿ ಸಿಲುಕಿಕೊಂಡು ಸರಕು ಹಡಗುಗಳ ಸಂಚಾರಕ್ಕೆ ತಡೆಯಾಗಿದ್ದ ಎವರ್ ಗಿವನ್ ಕಂಟೇನರ್ ಹಡಗು ನೀರಲ್ಲಿ ಮೇಲೆದ್ದು ಮತ್ತೆ ತೇಲಿದೆ ಎಂದು ಕಡಲ ಸೇವಾ ಪೂರೈಕೆದಾರ ಇಂಚೇಪ್ ಶಿಪ್ಪಿಂಗ್ ತಿಳಿಸಿದೆ.
400 ಮೀಟರ್ ಉದ್ದದ ಹಡಗು ವಿಶ್ವದ ಪ್ರಮುಖ ವ್ಯಾಪಾರ ಮಾರ್ಗವಾದ ಸೂಯೆಜ್ ಕೆನಾಲ್ನಲ್ಲಿ ಸಿಲುಕಿಕೊಂಡ ಬಳಿಕ, ಅದರ ತೆರವಿಗೆ ಸುಮಾರು ಒಂದು ವಾರ ತೆಗೆದುಕೊಳ್ಳಲಿದೆ ಎಂದು ಅಂದಾಜಿಸಲಾಗಿತ್ತು. ಆದರೆ, ಹಡಗು ಆರು ದಿನಗಳಲ್ಲಿ ಮರಳಿನ ಹಿಡಿತದಿಂದ ಮುಕ್ತಗೊಂಡಿದೆ.
"ಎಂವಿ ಎವರ್ ಗಿವನ್ ಅನ್ನು 2021ರ ಮಾರ್ಚ್ 29ರಂದು 04:30ಕ್ಕೆ ಯಶಸ್ವಿಯಾಗಿ ಮರು ತೇಲಿಸಲಾಯಿತು. ಹಡಗು ಸುರಕ್ಷಿತವಾಗಿದೆ. ಮುಂದಿನ ಹಂತಗಳ ಬಗ್ಗೆ ಹೆಚ್ಚಿನ ಮಾಹಿತಿಯನ್ನು ತಿಳಿಸಲಿದ್ದೇವೆ." ಎಂದು ಇಂಚೇಪ್ ಟ್ವೀಟ್ ಮಾಡಿದೆ.
ಇದನ್ನೂ ಓದಿ: ಹೇರ್ ಕಟ್ಗೆ ಮೋಟೆ, ಟ್ಯಾಕ್ಸಿಗೆ ಸಿಗರೇಟ್ ಆಯ್ತು: ಈಗ ತೈಲಕ್ಕೆ 'ಲಸಿಕೆ' ಕೊಡುವಂತೆ ವೆನಿಜುವೆಲಾ ಅಧ್ಯಕ್ಷ ಮನವಿ!
ಸ್ಪುಟ್ನಿಕ್ ಉಲ್ಲೇಖಿಸಿದ ಮಾಧ್ಯಮ ವರದಿಗಳ ಪ್ರಕಾರ, ಹಡಗು ಚಲಿಸುವಂತೆ ಮಾಡಲು ರಕ್ಷಣಾ ಸಿಬ್ಬಂದಿ ಯಶಸ್ವಿಯಾಗಿದ್ದಾರೆ. ಸೂಯೆಜ್ ಕಾಲುವೆ ಎಷ್ಟು ಬೇಗನೆ ಸಂಚಾರಕ್ಕೆ ಮುಕ್ತವಾಗಲಿದೆ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ ಎಂದಿದೆ.
ತೈವಾನ್‌ನ ಎವರ್ ಗಿವನ್ ಮರೈನ್ ಕಾರ್ಪ್ ನಿರ್ವಹಿಸುತ್ತಿರುವ 400 ಮೀಟರ್ ಉದ್ದದ ಎವರ್ ಗಿವನ್ ಹಡಗು, ಮೆಡಿಟರೇನಿಯನ್ ಅನ್ನು ಕೆಂಪು ಸಮುದ್ರಕ್ಕೆ ಸಂಪರ್ಕಿಸುವ ಪ್ರಮುಖ ವ್ಯಾಪಾರದ ಜಲ ಮಾರ್ಗದಲ್ಲಿ ಅಡಚಣೆ ಉಂಟುಮಾಡಿತ್ತು. ಈಗ 300ಕ್ಕೂ ಹೆಚ್ಚು ಹಡಗುಗಳು ಕಾಲುವೆಯ ಮೂಲಕ ಸಾಗಲು ಕಾಯುತ್ತಿವೆ.