ನವದೆಹಲಿ: ವ್ಯಾಪಕವಾದ ನಿರುದ್ಯೋಗ ದರಗಳು ಕೇವಲ ನಿರುದ್ಯೋಗಿಗಳ ಮೇಲೆ ಪರಿಣಾಮ ಬೀರುವುದಿಲ್ಲ. ಕೋವಿಡ್-19 ಸಾಂಕ್ರಾಮಿಕ ವೇಳೆ ಉದ್ಯೋಗದಲ್ಲಿರುವ ನೌಕರರ ಮೇಲೆ ಉದ್ಯೋಗ ಅಭದ್ರತೆ ಮತ್ತು ಆರ್ಥಿಕ ಕಾಳಜಿ ಖಿನ್ನತೆ ಮತ್ತು ಆತಂಕದಂತಹ ರೋಗ ಲಕ್ಷಣಗಳು ಕಂಡುಬರುತ್ತಿವೆ ಎಂದು ಸಮೀಕ್ಷೆಯೊಂದು ಹೇಳಿದೆ.
ಪ್ರಸ್ತುತದಲ್ಲಿನ ಉದ್ಯೋಗಿಗಳಲ್ಲಿ ಆರ್ಥಿಕ ಮತ್ತು ಉದ್ಯೋಗ ಸುರಕ್ಷತೆಯ ಬಗ್ಗೆ ಕಳವಳ ಹೊಂದಿದ್ದಾರೆ. ಆದರೆ, ಭಾರತೀಯರು ಭವಿಷ್ಯದ ಬಗ್ಗೆ ಆಶಾವಾದಿಗಳಾಗಿದ್ದಾರೆ ಎಂದು ಸಮೀಕ್ಷೆ ತಿಳಿಸಿದೆ.
2020ರ ನವೆಂಬರ್ 17 ಮತ್ತು ಡಿಸೆಂಬರ್ 11ರ ನಡುವೆ ನಡೆಸಿದ ಈ ಸಮೀಕ್ಷೆಯಲ್ಲಿ 17 ದೇಶಗಳ ಒಟ್ಟು 32,471 ಸಿಬ್ಬಂದಿ ಸೇರಿದ್ದಾರೆ. ಎಡಿಪಿ ಸಂಶೋಧನಾ ಸಂಸ್ಥೆ ನಡೆಸಿದ ಈ ‘ಪೀಪಲ್ ಅಟ್ ವರ್ಕ್ 2021: ಎ ಗ್ಲೋಬಲ್ ವರ್ಕ್‌ಫೋರ್ಸ್ ವ್ಯೂ’ ಸಮೀಕ್ಷೆಯ ಪ್ರಕಾರ, ಶೇ 95ರಷ್ಟು ಭಾರತೀಯ ಸಿಬ್ಬಂದಿ ಕೊರೊನಾ ಸಮಯದಲ್ಲಿ ತಮ್ಮ ಆರ್ಥಿಕ ಮತ್ತು ಉದ್ಯೋಗ ಸುರಕ್ಷತೆಯ ಬಗ್ಗೆ ಕಾಳಜಿ ವಹಿಸುತ್ತಿದ್ದಾರೆಂದು ಹೇಳಿದ್ದಾರೆ. ಮುಂದಿನ ಐದು ವರ್ಷಗಳಲ್ಲಿ ಭವಿಷ್ಯವು ಉತ್ತಮವಾಗಿರುತ್ತದೆ ಎಂದು ಅದೇ ಶೇಕಡಾವಾರು ಜನರು ಆಶಾವಾದಿಗಳಾಗಿದ್ದಾರೆ.
ಶೇ 86ರಷ್ಟು ಜನ ಕೊರೊನಾ ತಮ್ಮ ವೃತ್ತಿಯ ಮೇಲೆ ತೀವ್ರ ಪರಿಣಾಮ ಬೀರುತ್ತದೆ. ಅವರಲ್ಲಿ ಅರ್ಧದಷ್ಟು ಜನರು ತಮ್ಮ ಉದ್ಯೋಗವನ್ನು ಕಳೆದುಕೊಳ್ಳುತ್ತಾರೆ ಅಥವಾ ತಾತ್ಕಾಲಿಕ ವಜಾದಂತಹ ಆತಂಕ ಎದುರಿಸುತ್ತಿದ್ದಾರೆ ಎಂದು ಅಂದಾಜಿಸಿದೆ.
ಶೇ 30ರಷ್ಟು ನೌಕರರು ವೇತನ ಕಡಿತವಾಗಲಿದೆ, ಶೇ 25ರಷ್ಟು ಜನರು ತಮ್ಮ ಕೆಲಸದ ಸಮಯ ಅಥವಾ ಜವಾಬ್ದಾರಿಗಳನ್ನು ಕಡಿಮೆಗೊಳಿಸುವುದಾಗಿ ಹೇಳಿದ್ದಾರೆ.
ಮಾನವ ಸಂಪನ್ಮೂಲ (ಎಚ್‌ಆರ್) ತಂಡಗಳು ಸಿಬ್ಬಂದಿ ಮನಸ್ಸಿನಿಂದ ನಕಾರಾತ್ಮಕತೆ ತೆಗೆದುಹಾಕುವ ಮತ್ತು ಸಕಾರಾತ್ಮಕ ಅಂಶಗಳನ್ನು ತರುವ ಮಾರ್ಗಗಳನ್ನು ಅನ್ವೇಷಿಸುತ್ತಿವೆ.
ಮೂರನೇ ಎರಡರಷ್ಟು ಜನರು ತಮ್ಮ ಕೆಲಸವನ್ನು ಕಳೆದುಕೊಂಡರೆ, ತೃಪ್ತಿಕರವಾದ ಮತ್ತೊಂದು ಉದ್ಯೋಗವನ್ನು ಶೇ 68ರಷ್ಟು ಮತ್ತು ಉತ್ತಮ ಸಂಬಳ ಶೇ 65ರಷ್ಟು ಜನ ಕಂಡು ಕೊಳ್ಳುತ್ತಾರೆ ಎಂಬ ಆಶಾವಾದ ಇರಿಸಿಕೊಂಡಿದ್ದಾರೆ.