ನವದೆಹಲಿ: ರಾಷ್ಟ್ರೀಯ ಷೇರು ಮಾರುಕಟ್ಟೆಯಲ್ಲಿ ಅವ್ಯವಹಾರ ನಡೆಸಿದ ಗಂಭೀರ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ನಡೆಸುತ್ತಿರುವ ರಾಷ್ಟ್ರೀಯ ತನಿಖಾ ದಳ (ಸಿಬಿಐ), ಮಾಜಿ ಗ್ರೂಪ್ ಆಪರೇಟಿಂಗ್ ಆಫೀಸರ್ ಆನಂದ್ ಸುಬ್ರಮಣಿಯನ್ ಅವರನ್ನು ಇಂದು ಬಂಧಿಸಿದೆ.
ಕಳೆದ ಮೂರು ವರ್ಷಗಳಿಂದ ನಡೆಯುತ್ತಿರುವ ಪ್ರಕರಣದ ಸುದೀರ್ಘ ತನಿಖೆಯಲ್ಲಿ ಇದು ಮಹತ್ವದ ಬೆಳವಣಿಗೆಯಾಗಿದೆ. ಸೆಬಿ ಸಲ್ಲಿಸಿದ ವರದಿಯ ಆಧಾರದಲ್ಲಿ ಇವರನ್ನು ಬಂಧಿಸಲಾಗಿದೆ.
ಆನಂದ್ ಸುಬ್ರಮಣಿಯನ್ ಅವರನ್ನು ಬಂಧಿಸುವುದಕ್ಕೂ ಮುನ್ನ ಆರೋಪಿಯನ್ನು ಚೆನ್ನೈನಲ್ಲಿ ಸಾಕಷ್ಟು ವಿಚಾರಣೆಗೆ ಒಳಪಡಿಸಲಾಗಿತ್ತು ಎಂದು ಸಿಬಿಐ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಸುಬ್ರಮಣಿಯನ್ ಅವರನ್ನು ಮುಖ್ಯ ಸಲಹೆಗಾರರನ್ನಾಗಿ ಆಯ್ಕೆ ಮಾಡುವುದು ಮತ್ತು ಗ್ರೂಪ್ ಆಪರೇಟಿಂಗ್ ಆಫೀಸರ್ ಆಗಿ ಪದನಾಮ ಬದಲಿಸುವ ಸಂದರ್ಭದಲ್ಲಿ ಸಾಕಷ್ಟು ಆಡಳಿತ ವೈಫಲ್ಯ ಕಂಡುಬಂದಿದೆ ಎಂದು ಸೆಬಿ ತನ್ನ ವರದಿಯಲ್ಲಿ ಉಲ್ಲೇಖಿಸಿತ್ತು. ಎನ್‌ಎಸ್‌ಇ ಮಾಜಿ ಸಿಇಒ ಚಿತ್ರಾ ರಾಮಕೃಷ್ಣ ಹಾಗು ಇನ್ನಿತರರ ಮೇಲೆ ಸೆಬಿ ಪ್ರಕರಣದ ಗಂಭೀರ ಆರೋಪ ಹೊರಿಸಿದೆ.
ಈ ಪ್ರಕರಣದಲ್ಲಿ ಚಿತ್ರ ರಾಮಕೃಷ್ಣ ಅವರಿಗೆ ಸೆಬಿ 3 ಕೋಟಿ ರೂಪಾಯಿ, ಸುಬ್ರಮಣಿಯನ್‌ಗೆ 2 ಕೋಟಿ ರೂಪಾಯಿ ದಂಡ ಹಾಕಿದೆ. ಅದೇ ರೀತಿ ಎನ್‌ಎಸ್‌ಇ ಎಂಡಿ ಮತ್ತು ಸಿಇಒ ರವಿ ನರೈನ್ ಅವರಿಗೆ ತಲಾ 2 ಕೋಟಿ ದಂಡ ಕಟ್ಟುವಂತೆ ಆದೇಶಿಸಿದೆ. ಅಷ್ಟೇ ಅಲ್ಲ, ಮುಖ್ಯ ನಿಯಂತ್ರಕ ಅಧಿಕಾರಿ ವಿ.ಆರ್. ನರಸಿಂಹನ್ ಅವರಿಗೂ 6 ಲಕ್ಷ ರೂ ಜುಲ್ಮಾನೆ ವಿಧಿಸಿದೆ.
ಇದನ್ನೂ ಓದಿ: ಉಕ್ರೇನ್ಗೆ ತಕ್ಷಣದ ಆರ್ಥಿಕ ನೆರವು ನೀಡಲು ಸಿದ್ಧ: ವಿಶ್ವಬ್ಯಾಂಕ್