ನವದೆಹಲಿ: ಆದಾಯವನ್ನು ಹೆಚ್ಚಿಸಲು ಮತ್ತು ಹಣದುಬ್ಬರ ತಗ್ಗಿಸಲು ರಾಷ್ಟ್ರ ರಾಜಧಾನಿಯಲ್ಲಿ ಪೆಟ್ರೋಲಿಯಂ ಉತ್ಪನ್ನಗಳ ಮೇಲಿನ ವ್ಯಾಟ್ (ಮೌಲ್ಯವರ್ಧಿತ ತೆರಿಗೆ) ಕಡಿಮೆ ಮಾಡುವಂತೆ ದೆಹಲಿ ಪೆಟ್ರೋಲ್ ವಿತರಕರ ಒಕ್ಕೂಟ (ಡಿಪಿಡಿಎ) ರಾಜ್ಯ ಸರ್ಕಾರವನ್ನು ಒತ್ತಾಯಿಸಿದೆ.
ದೆಹಲಿ ಸರ್ಕಾರವು 2020ರ ಮೇ. 5ರಂದು ಪೆಟ್ರೋಲ್ ಮೇಲಿನ ವ್ಯಾಟ್ಅನ್ನು ಶೇ. 27ರಿಂದ 30ಕ್ಕೆ ಹೆಚ್ಚಿಸಿದೆ. ಡೀಸೆಲ್ ಮೇಲಿನ ವ್ಯಾಟ್ಅನ್ನು ಶೇ. 16.75ರಿಂದ 30ಕ್ಕೆ ಏರಿಕೆ ಮಾಡಿದೆ. ಇದರ ಪರಿಣಾಮವಾಗಿ ಡೀಸೆಲ್ ಮಾರಾಟವು ನೆರೆಯ ರಾಜ್ಯಗಳಿಂದ ಒಳ ಬಂದು ಕಳ್ಳ ಸಾಗಾಣಿಕೆಯಲ್ಲಿ ಮಾರಾಟ ಆಗುತ್ತಿದೆ. ಇಂಧನ ಕಳ್ಳಸಾಗಣೆಯಿಂದಾಗಿ ಆದಾಯದಲ್ಲಿ ಭಾರೀ ಇಳಿಕೆಯಾಗಿದೆ ಎಂದು ಒಕ್ಕೂಟ ಹೇಳಿದೆ.
2020ರ ಜೂನ್ ವೇಳೆ ದೆಹಲಿಯಲ್ಲಿ ಡೀಸೆಲ್ ಮಾರಾಟದ ಕುಸಿತವು ಶೇ. 64ರಷ್ಟಿದ್ದು, ರಾಷ್ಟ್ರೀಯ ಸರಾಸರಿ ಕುಸಿತಕ್ಕೆ ಹೋಲಿಸಿದರೆ ಶೇ. 18ರಷ್ಟಿದೆ. ಹೆಚ್ಚಿನ ವ್ಯಾಟ್‌ನಿಂದಾಗಿ ವರ್ಷಕ್ಕೆ 380 ಕೋಟಿ ರೂ.ಗಿಂತ ಹೆಚ್ಚಿನ ಆದಾಯ ನಷ್ಟವಾಗಲಿದೆ ಎಂದು ಎಚ್ಚರಿಸಿದೆ.
ಸಾಗಣೆದಾರರು ತಮ್ಮ ಸರಕು ಸಾಗಣೆ ಶುಲ್ಕ ಹೆಚ್ಚಿಸುವುದರಿಂದ ವ್ಯಾಟ್ ಏರಿಕೆಯಾಗಿ ಹಣದುಬ್ಬರ ಹೆಚ್ಚಳಕ್ಕೆ ಕಾರಣವಾಗಲಿದೆ. ದೆಹಲಿಯಲ್ಲಿ ಮಾತ್ರ ಡೀಸೆಲ್ ಬೆಲೆ ಪೆಟ್ರೋಲ್ಗಿಂತ ಅಧಿಕ ದರದಲ್ಲಿ ಮಾರಾಟ ಆಗುತ್ತಿದೆ. ಈ ಎರಡೂ ಉತ್ಪನ್ನಗಳ ಮೇಲಿನ ವ್ಯಾಟ್ ದರವು ಶೇ. 30ರಷ್ಟಿದೆ. ದೆಹಲಿಯನ್ನು ನೆರೆಯ ರಾಜ್ಯಗಳಿಗೆ ಹೋಲಿಸಿದರೆ ಈ ಎರಡು ಉತ್ಪನ್ನಗಳ ನಡುವಿನ ವ್ಯತ್ಯಾಸ ಲೀಟರ್‌ಗೆ 6ರಿಂದ 9 ರೂ.ನಷ್ಟಿದೆ.
ನೆರೆಯ ರಾಜ್ಯಗಳಿಗಿಂತ ಕಡಿಮೆ ವ್ಯಾಟ್ ದರವನ್ನು ನಿಗದಿಪಡಿಸುವಂತೆ ಸಂಘ ದೆಹಲಿ ಸರ್ಕಾರಕ್ಕೆ ಪ್ರಸ್ತಾಪಿಸಿದ್ದು, ಡೀಸೆಲ್ಗೆ ಪ್ರತಿ ಲೀಟರ್ ಮೇಲೆ 9 ರೂ. ಮತ್ತು ಪೆಟ್ರೋಲ್‌ಗೆ 3 ರೂ.ಗೂ ಹೆಚ್ಚು ಇಳಿಸುವಂತೆ ಕೋರಿದೆ.