ನವದೆಹಲಿ: ಭಾರತದಲ್ಲಿ ಡಿಜಿಟಲ್ ಕರೆನ್ಸಿ ಕುರಿತ ಚರ್ಚೆಗಳು ತೀವ್ರವಾಗುತ್ತಿವೆ. ಭಾರತಕ್ಕೆ ಕ್ರಿಪ್ಟೋಕರೆನ್ಸಿ ಬೇಕೋ?, ಬೇಡವೋ? ಎಂಬುದನ್ನು ಅವಲೋಕಿಸಲಾಗುತ್ತಿದೆ. ಈಗ ಭಾರತೀಯ ರಿಸರ್ವ್ ಬ್ಯಾಂಕ್ನ ಡೆಪ್ಯುಟಿ ಗವರ್ನರ್ ರಬಿ ಶಂಕರ್ ಕ್ರಿಪ್ಟೋಕರೆನ್ಸಿ ಬಗ್ಗೆ ಪ್ರತಿಕ್ರಿಯೆ ನೀಡಿದ್ದು, ಕ್ರಿಪ್ಟೋಕರೆನ್ಸಿ ಬ್ಯಾನ್ ಮಾಡುವುದು ಅತ್ಯಂತ ಸೂಕ್ಷ್ಮವಾದ ವಿಚಾರ ಎಂದು ಹೇಳಿದ್ದಾರೆ.
ಭಾಷಣವೊಂದರಲ್ಲಿ ಸೋಮವಾರ ಮಾತನಾಡಿದ ರಬಿ ಶಂಕರ್, ಕ್ರಿಪ್ಟೋಕರೆನ್ಸಿಗಳನ್ನು ಅಧಿಕೃತ ಕರೆನ್ಸಿ, ಆಸ್ತಿ ಅಥವಾ ಸರಕು ಎಂದು ವ್ಯಾಖ್ಯಾನಿಸಲು ಸೂಕ್ತವಲ್ಲ. ಕ್ರಿಪ್ಟೋಕರೆನ್ಸಿಗಳಿಗೆ ಯಾವುದೇ ನಗದು ಆಧಾರವಿರುವುದಿಲ್ಲ. ಅವುಗಳಿಗೆ ಯಾವುದೇ ಆಂತರಿಕ ಮೌಲ್ಯವೂ ಇಲ್ಲ. ಕ್ರಿಪ್ಟೋಕರೆನ್ಸಿ 'ಪೊಂಜಿ ಯೋಜನೆ'ಗಳಿಗೆ ಹೋಲುತ್ತವೆ ಅಥವಾ ಇನ್ನೂ ಕೆಟ್ಟದಾಗಿರಬಹುದು ಎಂದು ಅಭಿಪ್ರಾಯಪಟ್ಟರು.
ಈ ಎಲ್ಲಾ ಅಂಶಗಳನ್ನು ನೋಡಿದರೆ, ಕ್ರಿಪ್ಟೋ ನಿಷೇಧಿಸುವುದು ಬಹುಶಃ ಭಾರತಕ್ಕೆ ಅತ್ಯಂತ ಸೂಕ್ತ ಆಯ್ಕೆಯಾಗಿದೆ ಎಂಬ ತೀರ್ಮಾನಕ್ಕೆ ಬರಬಹುದು ಎಂದು ಅವರು ಹೇಳಿದ್ದಾರೆ. ಕಳೆದ ವಾರ ಆರ್ಬಿಐ ಕೂಡಾ ಕ್ರಿಪ್ಟೋಕರೆನ್ಸಿಗಳಲ್ಲಿ ಹೂಡಿಕೆ ಮಾಡುವವರಿಗೆ ಎಚ್ಚರಿಕೆ ನೀಡಿದೆ.
ಏನಿದು ಪೊಂಜಿ ಯೋಜನೆ?: ಆರ್ಬಿಐ ಡೆಪ್ಯುಟಿ ಗವರ್ನರ್ ರಬಿ ಶಂಕರ್ 'ಪೊಂಜಿ ಯೋಜನೆ ' ಎಂಬ ಪದವನ್ನಿಲ್ಲಿ ಉಲ್ಲೇಖಿಸಿದ್ದಾರೆ. ಪೊಂಜಿ ಯೋಜನೆ ಎಂಬುದು ಕಡಿಮೆ ಅತ್ಯಂತ ವೇಗವಾಗಿ ಹಣ ಮಾಡುವ ವಿಧಾನ. ಆದರೆ ಈ ಯೋಜನೆಯನ್ನು ವಂಚಕರು ಮಾತ್ರವೇ ಮಾಡಬಲ್ಲರು. ಆರಂಭದಲ್ಲಿ ಎಲ್ಲ ಸರಿಯಾಗಿದ್ದಂತೆ ಕಂಡುಬಂದರೂ, ಸಾಕಷ್ಟು ಹಣ ಬಂದಾಗ ವಂಚಕ ಪರಾರಿಯಾಗುವ ಸಾಧ್ಯತೆ ಇರುತ್ತದೆ.
ಇದನ್ನು ಇನ್ನೂ ಸರಳವಾಗಿ ಹೇಳುವುದಾದರೆ..: A ಎಂಬಾತ B ಎಂಬವನ ಬಳಿ ಒಂದು ಸಲಹೆ ನೀಡುತ್ತಾನೆ. ನೀನು ನನಗೆ 100 ರೂಪಾಯಿ ನೀಡಿದರೆ, ಅದನ್ನು 200 ರೂಪಾಯಿ ಮಾಡಿಕೊಡುತ್ತೇನೆ. ಅದರಲ್ಲಿ ನನಗೆ ಶೇಕಡಾ 20ರಷ್ಟು ಕಮಿಷನ್ ಕೊಡಬೇಕಾಗುತ್ತದೆ ಎನ್ನುತ್ತಾನೆ. ಇದನ್ನು ನಂಬಿದ B ವ್ಯಕ್ತಿ Aಗೆ 100 ರೂಪಾಯಿ ಕೊಡುತ್ತಾನೆ.
ಅದೇ 100 ರೂಪಾಯಿಯನ್ನು ತೆಗೆದುಕೊಂಡು ಹೋದ A ವ್ಯಕ್ತಿ C ಮತ್ತು D ವ್ಯಕ್ತಿಗಳನ್ನು ಭೇಟಿ ಮಾಡುತ್ತಾನೆ. A ಬಳಿ ಇಟ್ಟಿದ್ದ ಸಲಹೆಯನ್ನೇ C ಮತ್ತು D ವ್ಯಕ್ತಿಗಳ ಬಳಿ ಇಡುತ್ತಾನೆ. ಆದರೆ ಇಲ್ಲಿ ಕಮಿಷನ್ ಬಹುತೇಕ ಸ್ವಲ್ಪ ಮಟ್ಟಿಗೆ ಕಡಿಮೆ ಇರುವ ಸಾಧ್ಯತೆ ಇರುತ್ತದೆ. ಅವರಿಂದ ಹಣ ಪಡೆದ A ಅದನ್ನು B ವ್ಯಕ್ತಿಗೆ ನೀಡಿ, ಶೇಕಡಾ 20ರಷ್ಟು ಕಮಿಷನ್ ಪಡೆಯುತ್ತಾನೆ. ಪಡೆದ ಕಮಿಷನ್ ಹಣವನ್ನು C ಮತ್ತು D ವ್ಯಕ್ತಿಗಳಿಗೆ ನೀಡುತ್ತಾನೆ.
ಇದನ್ನೂ ಓದಿ: ಜನವರಿಯಲ್ಲಿ ಶೇ.6.01ಕ್ಕೆ ತಲುಪಿದ ಚಿಲ್ಲರೆ ಹಣದುಬ್ಬರ
ಇದರ ಜೊತೆಗೆ ಅತ್ಯಂತ ಪ್ರಮುಖವಾದ ವಿಚಾರವೆಂದರೆ, A ವ್ಯಕ್ತಿಯು B,C,D ವ್ಯಕ್ತಿಗಳಿಗೆ ಇನ್ನೂ ಹೆಚ್ಚು ಮಂದಿಗೆ ಹೂಡಿಕೆ ಮಾಡಿಸುವಂತೆ ಸಲಹೆ ನೀಡುತ್ತಾನೆ. ಈ ಮೂಲಕ ಹೆಚ್ಚು ಮಂದಿ ಹೂಡಿಕೆ ಮಾಡಲು ತೊಡಗಿದಾಗ, A ಎಲ್ಲರನ್ನೂ ವಂಚಿಸುತ್ತಾನೆ.
ಕ್ರಿಪ್ಟೋಕರೆನ್ಸಿಯಲ್ಲಿ ಹೂಡಿಕೆ ಕೂಡಾ ಇದೇ ತೆರನಾಗಿರುತ್ತದೆ ಎಂದು ಆರ್ಬಿಐ ಡೆಪ್ಯುಟಿ ಗವರ್ನರ್ ಹೇಳಿದ್ದು, ಹೂಡಿಕೆದಾರರು ಎಚ್ಚರಿಕೆ ವಹಿಸಬೇಕೆಂದು ಭಾಷಣದಲ್ಲಿ ಉಲ್ಲೇಖಿಸಿದ್ದಾರೆ. ಕೇಂದ್ರ ಸರ್ಕಾರ ಇತ್ತೀಚೆಗೆ ಹಣಕಾಸು ಬಜೆಟ್ ಮಂಡನೆ ಮಾಡಿದ್ದು, ಅದರಲ್ಲಿ ಡಿಜಿಟಲ್ ಕರೆನ್ಸಿ ಮೇಲೆ ತೆರಿಗೆ ವಿಧಿಸುವ ಬಗ್ಗೆ ಉಲ್ಲೇಖಿಸಿರುವುದು ಮತ್ತಷ್ಟು ಚರ್ಚೆಗೆ ಗ್ರಾಸವಾಗಿದೆ.